Connect with us


      
ವಾಣಿಜ್ಯ

ಜಿಟಿಟಿಸಿಯೊಂದಿಗೆ ಟೊಯೊಟಾ ಕಿರ್ಲೋಸ್ಕರ್ ಮೋಟಾರ್ ತಿಳುವಳಿಕಾ ಒಡಂಬಡಿಕೆಗೆ ಸಹಿ 

Kumara Raitha

Published

on

ಬೆಂಗಳೂರು: ಜುಲೈ 14, (ಯು.ಎನ್.‌ಐ.) ಮೇಕ್ ಇನ್ ಇಂಡಿಯಾ ಮತ್ತು ಸ್ಕಿಲ್ ಇಂಡಿಯಾ ಮೂಲಕ ಸ್ವಾವಲಂಬನೆ ಸಾಧಿಸುವ ಭಾರತದ ದೃಷ್ಟಿಕೋನಕ್ಕೆ ತನ್ನ ಬದ್ಧತೆಯನ್ನು ಪುನರುಚ್ಚರಿಸಿದ ಟೊಯೊಟಾ ಕಿರ್ಲೋಸ್ಕರ್ ಮೋಟಾರ್ (ಟಿಕೆಎಂ), ಇಂದು ಸರ್ಕಾರಿ ಟೂಲ್ ರೂಮ್ ಹಾಗೂ ತರಬೇತಿ ಕೇಂದ್ರ (ಜಿಟಿಟಿಸಿ) ದೊಂದಿಗೆ ತಿಳುವಳಿಕಾ ಒಡಂಬಡಿಕೆಗೆ ಸಹಿ ಹಾಕಿದೆ.

ವಿದ್ಯಾರ್ಥಿಗಳಿಗೆ ವ್ಯಾಪಕವಾದ ಉದ್ಯಮ ಮಟ್ಟದ ತರಬೇತಿಯನ್ನು ಒದಗಿಸುವ ಮತ್ತು ಯುವ ಭಾರತಕ್ಕೆ ಹೆಚ್ಚಿನ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಗುರಿಯನ್ನು ಹೊಂದಿರುವ ಈ ಹೊಸ ಮೈಲಿಗಲ್ಲು ಭಾರತೀಯ ವಾಹನ ಉದ್ಯಮದಲ್ಲಿ ವಿಶ್ವದರ್ಜೆಯ ಸ್ಕಿಲ್ ಪೂಲ್ (ಕೌಶಲ್ಯ ಕೊಳ) ಅನ್ನು ರಚಿಸುವ ಕಂಪನಿಯ ಗುರಿಯನ್ನು ಬಲಪಡಿಸುತ್ತದೆ.

ಈ ತಿಳುವಳಿಕಾ ಒಡಂಬಡಿಕೆಯನ್ನು ಜಿಟಿಟಿಸಿಯ ವ್ಯವಸ್ಥಾಪಕ ನಿರ್ದೇಶಕ ಶ್ರೀ ಎಚ್. ರಾಘವೇಂದ್ರ ಮತ್ತು ಟಿಕೆಎಂನ ಮಾನವ ಸಂಪನ್ಮೂಲ ಮತ್ತು ಸೇವೆಗಳ ಉಪಾಧ್ಯಕ್ಷರಾದ ಶ್ರೀ ಜಿ. ಶಂಕರ ಅವರು, ಕರ್ನಾಟಕದ ಗೌರವಾನ್ವಿತ ಮುಖ್ಯಮಂತ್ರಿಗಳಾದ ಶ್ರೀ ಬಸವರಾಜ ಬೊಮ್ಮಾಯಿ ಮತ್ತು ಕರ್ನಾಟಕ ಸರ್ಕಾರದ ಗೌರವಾನ್ವಿತ ಉನ್ನತ ಶಿಕ್ಷಣ, ಐಟಿ ಮತ್ತು ಬಿಟಿ, ವಿಜ್ಞಾನ ಮತ್ತು ತಂತ್ರಜ್ಞಾನ, ಕೌಶಲ್ಯ ಅಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಸಚಿವರಾದ ಡಾ. ಸಿ. ಎನ್. ಅಶ್ವಥ್ ನಾರಾಯಣ್ ಅವರ ಉಪಸ್ಥಿತಿಯಲ್ಲಿ ವಿನಿಮಯ ಮಾಡಿಕೊಳ್ಳಲಾಯಿತು.

ಗುಣಮಟ್ಟದ ಉತ್ಪನ್ನಗಳು ಮತ್ತು ಸೇವೆಗಳು ವಿಶ್ವದರ್ಜೆಯ ನುರಿತ ಮಾನವಶಕ್ತಿಯನ್ನು ಅಭಿವೃದ್ಧಿಪಡಿಸುವುದರಿಂದ ಉದ್ಭವಿಸುತ್ತವೆ. ಸುರಕ್ಷಿತ ಹಾಗೂ ಪರಿಸರ ಸ್ನೇಹಿ ವಾಹನಗಳನ್ನು ತಯಾರಿಸುವುದು ಮಾತ್ರವಲ್ಲದೆ, ಇಡೀ ಸಮಾಜದ ಸುಧಾರಣೆಗೆ ಕೊಡುಗೆ ನೀಡಲು ನುರಿತ ಕಾರ್ಯಪಡೆಯನ್ನು ನಿರ್ಮಿಸುವುದು ಇದರ ಪ್ರಮುಖ ಉದ್ದೇಶವಾಗಿದೆ.

ಈ ಹಿನ್ನೆಲೆಯಲ್ಲಿ ಮೇಲಿನ ಕಾರ್ಯಕ್ರಮವು ತರಬೇತುದಾರರಿಗೆ ಉತ್ಪಾದನಾ ಉದ್ಯಮಕ್ಕೆ ಸೂಕ್ತವಾದ ಕೌಶಲ್ಯಗಳನ್ನು ಪಡೆಯಲು ಮತ್ತು ಸೈದ್ಧಾಂತಿಕ(ಥಿಯರೆಟಿಕಲ್) ಹಾಗೂ ಆನ್-ದಿ-ಜಾಬ್ ತರಬೇತಿಯನ್ನು ಒಳಗೊಂಡ ‘ಕಲಿಯಿರಿ ಮತ್ತು ಸಂಪಾದಿಸಿ’ ( ಲರ್ನ್ ಅಂಡ್ ಅರ್ನ್) ವಿಧಾನದ ಮೂಲಕ ತಮ್ಮ ಉದ್ಯೋಗ ಸಾಮರ್ಥ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಕೋರ್ಸ್ ಅವಧಿಯು ಒಂದು ತಿಂಗಳ ಸೈದ್ಧಾಂತಿಕ (ಥಿಯರೆಟಿಕಲ್ ) ತರಬೇತಿಯನ್ನು ಒಳಗೊಂಡಿರುತ್ತದೆ, ನಂತರ 21 ತಿಂಗಳುಗಳ ಕಾಲ ಉದ್ಯೋಗ ತರಬೇತಿ (ಒಜೆಟಿ-ಆನ್ ಜಾಬ್ ಟ್ರೈನಿಂಗ್ ) ಆಧಾರಿತ ಉದ್ಯಮದಿಂದ ತರಬೇತಿ ನೀಡಲಾಗುತ್ತದೆ, ಇದರಲ್ಲಿ ಅಪ್ರೆಂಟಿಸ್ ಗಳು ತಮ್ಮ ಒಜೆಟಿ ಸಮಯದಲ್ಲಿ ಸ್ಟೈಫಂಡ್ ಪಡೆಯುತ್ತಾರೆ.

ಈ ಉಪಕ್ರಮದ ಬಗ್ಗೆ ಮಾತನಾಡಿದ ಟಿಕೆಎಂನ ಮಾನವ ಸಂಪನ್ಮೂಲ ಸೇವೆಗಳ ಉಪಾಧ್ಯಕ್ಷ  ಜಿ. ಶಂಕರ ಅವರು, “ನಾವು ಜಿಟಿಟಿಸಿಯೊಂದಿಗೆ ಸಹಭಾಗಿತ್ವ ಹೊಂದುತ್ತಿದ್ದಂತೆ ವಿದ್ಯಾರ್ಥಿಗಳು ಕಲಿಯಲು ಮತ್ತು ಅಭ್ಯಾಸ ಮಾಡಲು ಸಾಧ್ಯವಾಗುತ್ತದೆ ಎಂದು ಖಚಿತಪಡಿಸಿಕೊಳ್ಳುವ ಮೂಲಕ “ಸ್ಕಿಲ್ ಇಂಡಿಯಾ ಮಿಷನ್” ಅನ್ನು ಬಲಪಡಿಸುವ ಗುರಿಯನ್ನು ನಾವು ಹೊಂದಿದ್ದೇವೆ. ಆ ಮೂಲಕ ನುರಿತ ಮಾನವ ಸಂಪನ್ಮೂಲದ ಲಭ್ಯತೆ ಹೆಚ್ಚಳವಾಗಲಿದೆ. ಉದ್ಯಮವು ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವಾಗ, ಸರಿಯಾದ ಕೌಶಲ್ಯ, ಜ್ಞಾನ ಮತ್ತು ಮನೋಭಾವದ ತೀವ್ರ ಅವಶ್ಯಕತೆಯಿದೆ. ಈ ಸವಾಲನ್ನು ಸಾಧಿಸಲು, ಜಿಟಿಟಿಸಿಯೊಂದಿಗೆ ನಾವು ವಿದ್ಯಾರ್ಥಿಗಳಿಗೆ ಸರಿಯಾದ ಕೌಶಲ್ಯಗಳನ್ನು ಒದಗಿಸುವ ಮೂಲಕ ಮತ್ತು ಅವರನ್ನು ಉದ್ಯೋಗಸ್ಥ ಯುವಕರಾಗಿ ಅಭಿವೃದ್ಧಿಪಡಿಸುವ ಮೂಲಕ ಅಂತರವನ್ನು ಕಡಿಮೆ ಮಾಡುತ್ತಿದ್ದೇವೆ” ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ, ಜಿಟಿಟಿಸಿಯ ವ್ಯವಸ್ಥಾಪಕ ನಿರ್ದೇಶಕ ಶ್ರೀ ಎಚ್. ರಾಘವೇಂದ್ರ ಅವರು ಮಾತನಾಡಿ, “ಈ ಹೊಸ ಕಾರ್ಯಕ್ರಮಗಳು ಭಾರತದ ಧ್ಯೇಯವನ್ನು ಬೆಂಬಲಿಸುವುದಲ್ಲದೆ, ಉದ್ಯೋಗಾವಕಾಶಗಳನ್ನು ಹೆಚ್ಚಿಸುವ ಮೂಲಕ ಮಾನವಸಂಪನ್ಮೂಲವನ್ನು ವೃದ್ಧಿಸುವುದರಿಂದ ಸಾಮಾಜಿಕ ಅಭಿವೃದ್ಧಿಯೂ ಸಹ ಸಾಧ್ಯವಾಗಲಿದೆ ಎಂದರು.ಉದ್ಯಮದ ಪಾಲುದಾರನಾಗಿ ಟೊಯೊಟಾ ಮತ್ತು ಮೂಲ ತರಬೇತಿ ಒದಗಿಸುವ ಜಿಟಿಟಿಸಿ ನಡುವಿನ ಈ ಸಹಯೋಗವು ರಾಷ್ಟ್ರದ “ಮೇಕ್ ಇನ್ ಇಂಡಿಯಾ” ಮತ್ತು “ಸ್ಕಿಲ್ ಇಂಡಿಯಾ” ದ ದೃಷ್ಟಿಕೋನಕ್ಕೆ ಕೊಡುಗೆ ನೀಡುವಲ್ಲಿ ಗಣನೀಯ ಪಾತ್ರ ವಹಿಸಲಿದೆ.

ಸುಧಾರಿತ ತಂತ್ರಜ್ಞಾನಗಳು ಮತ್ತು ಉತ್ಪಾದನೆಯಲ್ಲಿ ವಿಶ್ವದರ್ಜೆಯ ಮಾನವ ಸಂಪನ್ಮೂಲವನ್ನು ಸೃಷ್ಟಿಸಲು, ಟಿಕೆಎಂ ತಮ್ಮ ತರಬೇತಿ ಸಂಸ್ಥೆಯ ಪ್ರಮುಖ ವಿಸ್ತರಣೆಯನ್ನು ಕೈಗೆತ್ತಿಕೊಂಡಿದೆ. ತರಬೇತಿ ಸಾಮರ್ಥ್ಯವು 200 ರಿಂದ 1,200 ವಿದ್ಯಾರ್ಥಿಗಳಿಗೆ ಏರುತ್ತದೆ. ಟಿಕೆಎಂ ವಿವಿಧ ಕೌಶಲ್ಯ ಅಭಿವೃದ್ಧಿ ಉಪಕ್ರಮಗಳಲ್ಲಿ 77,360 ಕ್ಕೂ ಹೆಚ್ಚು ಉದ್ಯೋಗಸ್ಥ ಯುವಕರಿಗೆ ತರಬೇತಿ ನೀಡಿದೆ. ಟಿಕೆಎಂ ಸಹಯೋಗದೊಂದಿಗೆ ಕರ್ನಾಟಕದ ಪ್ರತಿ ಜಿಲ್ಲೆಯಲ್ಲಿ (31 ಜಿಲ್ಲೆಗಳು) ಒಂದು ಕೈಗಾರಿಕಾ ತರಬೇತಿ ಸಂಸ್ಥೆಯನ್ನು (ಐಟಿಐ) ಅಭಿವೃದ್ಧಿಪಡಿಸುವಲ್ಲಿ ತೊಡಗಿದೆ. ಟೊಯೊಟಾ ತಾಂತ್ರಿಕ ಶಿಕ್ಷಣ ಕಾರ್ಯಕ್ರಮ (ಟಿಟಿಇಪಿ) ಮೂಲಕ, ಟಿಕೆಎಂ ಭಾರತದ 17 ರಾಜ್ಯಗಳಲ್ಲಿನ 49 ಸಂಸ್ಥೆಗಳಲ್ಲಿ ಪ್ರಶಿಕ್ಷಣಾರ್ಥಿಗಳನ್ನು ಅಭಿವೃದ್ಧಿಪಡಿಸುವುದನ್ನು ಮುಂದುವರಿಸಿದೆ. ಇದಲ್ಲದೆ, ಟಿಕೆಎಂ ಕರ್ನಾಟಕ, ಕೇರಳ, ಒಡಿಶಾ, ತಮಿಳುನಾಡು, ಮಹಾರಾಷ್ಟ್ರ, ಹರಿಯಾಣ, ನವದೆಹಲಿ ಮತ್ತು ತೆಲಂಗಾಣ ಸರ್ಕಾರದೊಂದಿಗೆ ಒಪ್ಪಂದಗಳನ್ನು ಹೊಂದುವ ಮೂಲಕ ವಿದ್ಯಾರ್ಥಿಗಳು ಮತ್ತು ಬೋಧಕ ಸದಸ್ಯರಿಗೆ ಕೌಶಲ್ಯ ತರಬೇತಿಯನ್ನು ನೀಡುತ್ತಿದೆ.

Share