ನವದೆಹಲಿ, ಜ 20(ಯುಎನ್ ಐ) ನಾವು ಆಗಾಗ್ಗೆ ರೈಲುಗಳಲ್ಲಿ ಪ್ರಯಾಣಿಸುತ್ತೇವೆ. ಆದರೆ, ರೈಲು ನಿರ್ವಹಣೆ, ಕಾರ್ಯಾಚರಣೆಗಳ ಬಗ್ಗೆ ಸಾಮಾನ್ಯವಾಗಿ ಅತ್ಯಂತ ಕಡಿಮೆ ತಿಳಿದುಕೊಂಡಿರುತ್ತೇವೆ. ಆದರೆ ಪ್ರತಿಯೊಬ್ಬರೂ ಇವುಗಳ ಬಗ್ಗೆ ತಿಳಿದು ಕೊಳ್ಳಲು ಆಸಕ್ತಿ ಹೊಂದಿರುತ್ತಾರೆ. ನಿರ್ದಿಷ್ಟವಾಗಿ ರೈಲುಗಳು ಗೇರ್ಗಳನ್ನು ಹೊಂದಿದೆಯೇ? ಹಾಗಿದ್ದರೆ ಅವು ಹೇಗೆ ಕೆಲಸ ಮಾಡುತ್ತವೆ ? ಎಂಬ ಸಂದೇಹ ಎಲ್ಲರಲ್ಲೂ ಇದೆ. ಅದರ ವಿವರಗಳಿಗೆ ಹೋದರೆ ರೈಲುಗಳು ಗೇರ್ ಹೊಂದಿರುತ್ತವೆ. ಆದರೆ ಅವುಗಳನ್ನು ಕಾರು ಇಲ್ಲವೆ ಬೈಕ್ಗಳ ಗೇರ್ಗಳಿಗೆ ಹೋಲಿಸುವಂತಿಲ್ಲ.
ಓರ್ವ ಲೋಕೋ ಪೈಲಟ್ ನೀಡಿದ ಮಾಹಿತಿ ಪ್ರಕಾರ, ರೈಲು ಇಂಜಿನ್ ನಲ್ಲಿರುವ ಗೇರ್ ಅನ್ನು ನಾಚ್ ಎಂದು ಕರೆಯಲಾಗುತ್ತದೆ. ಡೀಸೆಲ್ ಲೊಕೊಮೊಟಿವ್ ಎಂಜಿನ್- ಎಲೆಕ್ಟ್ರಿಕ್ ಲೊಕೊಮೊಟಿವ್ ಎಂಜಿನ್ ವಿನ್ಯಾಸ ವಿಭಿನ್ನವಾಗಿರುತ್ತದೆ, ಡೀಸೆಲ್ ಲೊಕೊಮೊಟಿವ್ ಎಂಜಿನ್ನ ವಿಷಯದಲ್ಲಿ ಒಟ್ಟು ಎಂಟು ನಾಚ್ ಗಳನ್ನು ಹೊಂದಿರುತ್ತದೆ. ಹೆಚ್ಚಿನ ರೈಲುಗಳು ಎಂಟನೇ ನಾಚ್ನಲ್ಲಿ ಗಂಟೆಗೆ 100 ಕಿಲೋಮೀಟರ್ ವೇಗದಲ್ಲಿ ಚಲಿಸುತ್ತವೆ. ಒಂದು ಬಾರಿ ನಾಚ್ ನಿಗಧಿ ಪಡಿಸಿದ ನಂತರ ಮತ್ತೆ ಬದಲಾಯಿಸುವ ಅಗತ್ಯವಿಲ್ಲ. ವೇಗವನ್ನು ಕಡಿಮೆ ಮಾಡಲು ಬಯಸಿದಾಗ, ನೀವು ನಾಚ್ ಅನ್ನು ನಿಧಾನಗೊಳಿಸಬೇಕು. ಈ ಮೂಲಕ ರೈಲುಗಳ ವೇಗವನ್ನು ನಿಯಂತ್ರಿಸಲಾಗುತ್ತದೆ.