Connect with us


      
ದೇಶ

ಪಾರ್ಥ ಚಟರ್ಜಿ, ಅರ್ಪಿತಾ ಮುಖರ್ಜಿ 14 ದಿನ ಜೈಲುಪಾಲು

Lakshmi Vijaya

Published

on

ಕೊಲ್ಕತ್ತ: ಆಗಸ್ಟ್ 05 (ಯು.ಎನ್.ಐ.) ಶಾಲಾ ಶಿಕ್ಷಕರ ಅಕ್ರಮ ನೇಮಕಾತಿ ಹಗರಣದಲ್ಲಿ ಬಂಧಿತರಾಗಿರುವ ತೃಣಮೂಲ ಕಾಂಗ್ರೆಸ್ ನಾಯಕ ಪಾರ್ಥ ಚಟರ್ಜಿ ಮತ್ತು ಅವರ ಸಹಾಯಕಿ ಅರ್ಪಿತಾ ಮುಖರ್ಜಿ ಅವರನ್ನು 14 ದಿನಗಳ ಕಾಲ ಜೈಲಿಗೆ ಕಳುಹಿಸಲಾಗಿದೆ. ಪ್ರಕರಣದ ಮುಂದಿನ ವಿಚಾರಣೆ ಆಗಸ್ಟ್ 18 ರಂದು ನಡೆಯಲಿದೆ.

ಜಾರಿ ನಿರ್ದೇಶನಾಲಯ ಬಂಗಾಳದ ಮಾಜಿ ಶಿಕ್ಷಣ ಸಚಿವ ಮತ್ತು ಅರ್ಪಿತಾ ಮುಖರ್ಜಿಯನ್ನು 14 ದಿನಗಳ ಕಸ್ಟಡಿಗೆ ಕೇಳಿತ್ತು. ಪ್ರಕರಣದಲ್ಲಿ ಹೊಸ ಬೆಳವಣಿಗೆ ಕುರಿತು ಇಬ್ಬರು ಆರೋಪಿಗಳನ್ನು ವಿಚಾರಣೆ ನಡೆಸಬೇಕಾಗಿದೆ ಎಂದು ತನಿಖಾ ಸಂಸ್ಥೆಯ ವಕೀಲರು ಹೇಳಿದ್ದಾರೆ.

ಅಕ್ರಮ ಹಣ ವರ್ಗಾವಣೆ ತಡೆ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಜಿಬೋನ್ ಕುಮಾರ್ ಸಾಧು ಅವರು ಪ್ರಕರಣದ ಎಲ್ಲಾ ಕಕ್ಷಿದಾರರ ವಾದ ಆಲಿಸಿದ ನಂತರ ತಮ್ಮ ಆದೇಶವನ್ನು ಕಾಯ್ದಿರಿಸಿದ್ದಾರೆ.

ಪಾರ್ಥ ಚಟರ್ಜಿ ಮತ್ತು ಅರ್ಪಿತಾ ಮುಖರ್ಜಿ ಪಶ್ಚಿಮ ಬಂಗಾಳದ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳ ಅಕ್ರಮ ನೇಮಕಾತಿಗಳಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಜುಲೈ 23 ರಂದು ಬಂಧನಕ್ಕೊಳಗಾಗಿದ್ದರು.

ಜಾಮೀನು ಕೋರಿರುವ ಬಂಧಿತ ಪಾರ್ಥ ಚಟರ್ಜಿ ಪರ ವಕೀಲರು ವಾದಿಸುತ್ತಾ  ಅವರು ಈಗ ಸಾಮಾನ್ಯ ವ್ಯಕ್ತಿಯಾಗಿದ್ದು, ತನಿಖೆಯಿಂದ ಓಡಿಹೋಗುವುದಿಲ್ಲ ಎಂದು ಹೇಳಿದರು. ಅವರು ಪ್ರಭಾವಿ ವ್ಯಕ್ತಿಯಲ್ಲ ಮತ್ತು ತಮ್ಮ ಶಾಸಕತ್ವವನ್ನು ಬಿಟ್ಟುಕೊಡುವ ಬಗ್ಗೆಯೂ ಯೋಚಿಸಲು ಸಿದ್ಧರಿದ್ದಾರೆ ಎಂದು ತಿಳಿಸಿದ್ದಾರೆ.

ಪಾರ್ಥ ಚಟರ್ಜಿ ಕಸ್ಟಡಿಯಲ್ಲಿದ್ದ15 ದಿನಗಳಲ್ಲಿ, ಸರ್ಕಾರಿ ಸ್ವಾಮ್ಯದ ಎಸ್‌ಎಸ್‌ಕೆಎಂ ಆಸ್ಪತ್ರೆಗೆ ದಾಖಲಾಗಿದ್ದಕ್ಕಾಗಿ ಕನಿಷ್ಠ ಎರಡು ದಿನಗಳು ವ್ಯರ್ಥವಾಯಿತು ಎಂದು ಇಡಿ ಹೇಳಿಕೊಂಡಿದೆ.

ಪಾರ್ಥ ಮುಖರ್ಜಿ ಅವರ ಒಡೆತನದ ಫ್ಲಾಟ್‌ಗಳಿಂದ 49.8 ಕೋಟಿ ರೂ. ನಗದು, ಅಪಾರ ಪ್ರಮಾಣದ ಚಿನ್ನಾಭರಣಗಳು ಮತ್ತು ಚಿನ್ನದ ಗಟ್ಟಿ,  ಆಸ್ತಿಗಳ ದಾಖಲೆಗಳು ಮತ್ತು ಇಬ್ಬರು ಆರೋಪಿಗಳು ಹೊಂದಿರುವ ಕಂಪನಿಯ ಜಂಟಿ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಇಡಿ ಹೇಳಿಕೊಂಡಿದೆ.

ಪಾರ್ಥ ಚಟರ್ಜಿ ಅವರನ್ನು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಸಚಿವ ಸ್ಥಾನದಿಂದ ಕಿತ್ತೆಸೆದಿದ್ದಾರೆ.  ತೃಣಮೂಲ ಕಾಂಗ್ರೆಸ್ ಪಕ್ಷದಲ್ಲಿ ಅವರು ಹೊಂದಿದ್ದ ಎಲ್ಲಾ ಹುದ್ದೆಗಳಿಂದ ತೆರವು ಮಾಡಲಾಗಿದೆ.

Share