Connect with us


      
ವಿದೇಶ

ಯುಎಇ ಅಧ್ಯಕ್ಷ, ಅಬುದಾಬಿಯ ದೊರೆ ನಿಧನ

Lakshmi Vijaya

Published

on

ಅಬುದಾಬಿ: ಮೇ 13 (ಯು.ಎನ್.ಐ.) ಯುನೈಟೆಡ್ ಅರಬ್ ಎಮಿರೇಟ್ಸ್ ಅಧ್ಯಕ್ಷ ಶೇಖ್ ಖಲೀಫಾ ಬಿನ್ ಜಾಯೆದ್ ಅಲ್ ನಹ್ಯಾನ್ ಅವರು ಶುಕ್ರವಾರ 73 ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ.  ಹಲವಾರು ವರ್ಷಗಳಿಂದ ಅನಾರೋಗ್ಯದಿಂದ ಹೋರಾಡಿದ ನಂತರ ಸಾವನ್ನಪ್ಪಿದ್ದಾರೆ ಎಂದು  ಅಧ್ಯಕ್ಷೀಯ ವ್ಯವಹಾರಗಳ ಸಚಿವಾಲಯ ತಿಳಿಸಿದೆ.

ಎಮಿರೇಟ್ಸ್ ಅಧ್ಯಕ್ಷ ಶೇಖ್ ಖಲೀಫಾ ಬಿನ್ ಜಾಯೆದ್ ಅಲ್ ನಹ್ಯಾನ್ ಸಾವಿಗೆ ಸಂತಾಪ ಸೂಚಿಸಿ, ಅಧ್ಯಕ್ಷೀಯ ವ್ಯವಹಾರಗಳ ಸಚಿವಾಲಯವು 40 ದಿನಗಳ ಶೋಕಾಚರಣೆಯನ್ನು ಘೋಷಿಸಿದೆ.  ಶುಕ್ರವಾರದಿಂದ ಧ್ವಜಗಳನ್ನು ಅರ್ಧಮಟ್ಟಕ್ಕಿಳಿಸುವುದು ಮತ್ತು ಮೊದಲ ಮೂರು ದಿನಗಳವರೆಗೆ ಸಾರ್ವಜನಿಕ ಮತ್ತು ಖಾಸಗಿ ವಲಯದಲ್ಲಿ ಕೆಲಸವನ್ನು ಸ್ಥಗಿತಗೊಳಿಸಲಾಗಿದೆ.

ಶೇಖ್ ಖಲೀಫಾ ಅವರು ನವೆಂಬರ್ 2004 ರಲ್ಲಿ ಯುಎಇಯ ಎರಡನೇ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡರು, ಅವರ ತಂದೆಯ ನಂತರ ಫೆಡರೇಶನ್‌ನ ಏಳು ಎಮಿರೇಟ್‌ಗಳಲ್ಲಿ ಶ್ರೀಮಂತ ಅಬುಧಾಬಿಯ 16 ನೇ ಆಡಳಿತಗಾರರಾದರು.

ಶೇಖ್ ಖಲೀಫಾ ಬಿನ್ ಜಾಯೆದ್ ಅಲ್ ನಹ್ಯಾನ್ ಅವರು 2014 ರಿಂದ ಸಾರ್ವಜನಿಕವಾಗಿ ವಿರಳವಾಗಿ ಕಾಣಿಸಿಕೊಂಡಿದ್ದರು. ಪಾರ್ಶ್ವವಾಯು ನಂತರ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು.  ಆದರೂ ಅವರು ಸಮಸ್ಯೆ ಪರಿಹರಿಸಿ ತೀರ್ಪು ನೀಡುತ್ತಿದ್ದರು.

ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಯುಎಇ ಅಧ್ಯಕ್ಷರ ನಿಧನಕ್ಕೆ ಸಂತಾಪ ಸೂಚಿಸಿ ಟ್ವೀಟ್ ಮಾಡಿದ್ದು, ಶೇಖ್ ಖಲೀಫಾ ಯಾವಾಗಲೂ ಕೇರಳದೊಂದಿಗೆ ಸೌಹಾರ್ದಯುತ ಸಂಬಂಧವನ್ನು ಇಟ್ಟುಕೊಂಡಿದ್ದರು ಎಂದು ಹೇಳಿದ್ದಾರೆ.

“ಕೇರಳದೊಂದಿಗೆ ಸದಾ ಸೌಹಾರ್ದಯುತ ಸಂಬಂಧವನ್ನು ಇಟ್ಟುಕೊಂಡಿರುವ ಯುಎಇ ಅಧ್ಯಕ್ಷ ಹಿಸ್ ಹೈನೆಸ್ ಶೇಖ್ ಖಲೀಫಾ ಬಿನ್ ಜಾಯೆದ್ ಅಲ್ ನಹ್ಯಾನ್ ಅವರ ನಿಧನದಿಂದ ತೀವ್ರ ದುಃಖವಾಗಿದೆ. ಅವರು ಎಮಿರೇಟ್ಸ್ ಅನ್ನು ಆಧುನೀಕರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ದೂರದೃಷ್ಟಿಯ ನಾಯಕರಾಗಿದ್ದರು. ಅವರ ಕೊಡುಗೆಗಳು ಶಾಶ್ವತವಾಗಿ ಸ್ಮರಣೀಯವಾಗಿದೆ,” ಎಂದು ಪಿಣರಾಯಿ ವಿಜಯನ್ ಟ್ವೀಟ್ ಮಾಡಿದ್ದಾರೆ.

Share