Connect with us


      
ಸಾಮಾನ್ಯ

ಗಡಾಫಿಯ ಆಡಳಿತದಲ್ಲಿನ ದೋಷಗಳು

Kumara Raitha

Published

on

ಉದಯ ಇಟಗಿ

ಅಂಕಣ: ಲಿಬಿಯಾ ಕಥನ

ಗಡಾಫಿ ಒಬ್ಬ ಚಾಣಾಕ್ಷ ರಾಜಕಾರಿಣಿಯಾದರೂ ಅವನಿಗೆ ತನ್ನ ಆಡಳಿತದಲ್ಲಿದ್ದ ದೋಷಗಳ ಬಗ್ಗೆ ಗೊತ್ತೇ ಇರಲಿಲ್ಲ. ದೇಶದ ಅಭಿವೃದ್ಧಿಗಾಗಿ ಆತ ಅಳವಡಿಸಿದ ರೀತಿ-ನೀತಿಗಳು ಸರಿಯಾಗಿದ್ದವು. ಆದರೆ ಅವು ಸರಿಯಾಗಿ ಕಾರ್ಯ ನಿರ್ವಹಿಸುವಂತೆ ನೋಡಿಕೊಳ್ಲುವಲ್ಲಿ ಆತ ವಿಫಲನಾದ. ಉದಾಹರಣೆಗೆ ಇಲ್ಲಿನ ಸಾಕಷ್ಟು ಸರಕಾರಿ ಅಧಿಕಾರಿಗಳು ಸೋಂಬೇರಿಗಳು ಮತ್ತು ಭ್ರಷ್ಟರಾಗಿದ್ದರು. ಅವನು ಮನಸ್ಸು ಮಾಡಿದ್ದರೆ ಅವರಿಂದ ಸಾಕಷ್ಟು ಕೆಲಸವನ್ನು ತೆಗೆದು ದೇಶವನ್ನು ಇನ್ನಷ್ಟು ಪ್ರಗತಿಯತ್ತ ಕೊಂಡೊಯ್ಯಬಹುದಿತ್ತು.

ಹಾಗೆ ಮಾಡದೆ ಅವರನ್ನು ಅವರಿಷ್ಟಕ್ಕೆ ತಕ್ಕಂತೆ ಬಿಟ್ಟನು. ಕ್ರಾಂತಿ ಏಳುವ ಒಂದು ವರ್ಷ ಮುಂಚೆ ಅಂತಾ ಕಾಣುತ್ತೆ. ಒಮ್ಮೆ ಇಲ್ಲಿನ ಸಾರ್ವಜನಿಕ ಸಭೆಯೊಂದನ್ನುದ್ದೇಶಿಸಿ “ನೀವು ಇನ್ನೂ ಐವತ್ತು ವರ್ಷಗಳ ಕಾಲ ಕುಳಿತು ತಿಂದರೂ ನಾನು ನಿಮ್ಮ ಹೊಟ್ಟೆಗೆ ಹಾಕಬಲ್ಲೆ. ಯಾವುದಕ್ಕೂ ಯೋಚಿಸಬೇಕಾಗಿಲ್ಲ. ಲಿಬಿಯಾದಲ್ಲಿ ಕರಗದಷ್ಟು ಆಸ್ತಿ ಇದೆ. ಆದರೆ ನೀವು ಕೆಲಸ ಮಾಡಿ. ಕೆಲಸ ಮಾಡಿದರೆ ದೇಶ ಮುಂದುವರಿಯುತ್ತದೆ.” ಎಂದು ಕರೆ ಕೊಟ್ಟಿದ್ದನಾದರೂ ಕೆಲಸ ಮಾಡದೇ ಇರುವವರ ವಿರುದ್ಧ ಯಾವುದೇ ಕಠಿಣ ಕ್ರಮ ಕೈಗೊಳ್ಳಲೇ ಇಲ್ಲ. ಪರಿಣಾಮವಾಗಿ ಇಲ್ಲಿನವರು ಹೊರಜಗತ್ತಿನವರೊಂದಿಗೆ ಸ್ಪರ್ಧಿಸಿ ದೇಶವನ್ನು ಮುನ್ನಡೆಸುವ ಮನೋಭಾವನೆಯನ್ನೇ ಕಳೆದುಕೊಂಡರು.

ಲಿಬಿಯಾದ ಬಹಳಷ್ಟು ಸರಕಾರಿ ಅಧಿಕಾರಿಗಳು ಅಂದರೆ ಶೇಕಡ 65% ಅಧಿಕಾರಿಗಳು ಎರೆಡೆರೆಡು ಕಡೆ ಸಂಬಳ ತೆಗೆದುಕೊಳ್ಳುತ್ತಿದ್ದರು. ಕೆಲವರಂತೂ ಒಂದು ಕಡೆ ಕೆಲಸ ಮಾಡಿ ನಾಲ್ಕೈದು ಸಂಬಳಗಳನ್ನು ತೆಗೆದುಕೊಳ್ಳುತ್ತಿದ್ದರು. ಇನ್ನು ಕೆಲವರು ಎಂಟ್ಹತ್ತು ಸಂಬಳಗಳನ್ನು ತೆಗೆದುಕೊಂಡ ಉದಾಹರಣೆಗಳು ಕೂಡಾ ಇವೆ. ಹಾಗಾದರೆ ಇದು ಗಡಾಫಿಗೆ ಗೊತ್ತಿರಲಿಲ್ಲವೇ? ಗೊತ್ತಿತ್ತು ಎಂದು ಇಲ್ಲಿನವರು ಹೇಳುತ್ತಾರೆ. ಆದರೂ ಸುಮ್ಮನಿದ್ದ ಏಕೆ? ಇದು ಅವನ ಉದಾಸೀನವೋ? ಅಥವಾ ಹೇಗಿದ್ದರೂ ನಮ್ಮವರೇ ತಿನ್ನುತ್ತಾರೆ ತಿನ್ನಲಿ ಎನ್ನುವ ಅವನ ಉದಾರ ಮನೋಭಾವವೋ? ಅಥವಾ ಇದನ್ನು ಪ್ರಶ್ನಿಸಿದರೆ ತನ್ನ ಖುರ್ಚಿಗೆ ಎಲ್ಲಿ ಧಕ್ಕೆ ಬರುತ್ತದೋ ಎನ್ನುವ ಅಳುಕಿತ್ತೇ?

ಇವನ್ನೆಲ್ಲಾ ಅವನ ನೇರ, ನಿಷ್ಠುರ ಹಾಗೂ ತಿಕ್ಕಲುತನದ ವಕ್ತಿತ್ವದ ಹಿನ್ನೆಲೆಯಲ್ಲಿಟ್ಟು ನೋಡಿದಾಗ ಯಾವುದೆಂದು ಸರಿಯಾಗಿ ನಿರ್ಧರಿಸುವದು ಕಷ್ಟವಾಗುತ್ತದೆ. ಆತನನ್ನು ಬಗೆಯುತ್ತಾ ಹೋದಷ್ಟು ನಿಗೂಢವಾಗುತ್ತಾ ಹೋಗುತ್ತಾನೆ. ಮೇಲಾಗಿ ಬಹಳಷ್ಟು ಸರಕಾರಿ ಅಧಿಕಾರಿಗಳು ವರ್ಷಾನುಗಟ್ಟಲೇ ಕಾರಣವಿಲ್ಲದೆ ರಜೆಯ ಮೇಲೆ ಹೋದರೂ ಅವರನ್ನು ಕೆಲಸದಿಂದ ತೆಗೆಯುವದಾಗಲಿ ಅಥವಾ ಅವರ ಸಂಬಳವನ್ನು ಹಿಡಿಯುವದಾಗಲಿ ಮಾಡುತ್ತಿರಲಿಲ್ಲ. ಹೀಗಾಗಿ ಸರಕಾರಿ ಅಧಿಕಾರಿಗಳಲ್ಲಿ ಹೇಗಿದ್ದರೂ ನಡೆಯುತ್ತೆ ಎನ್ನುವ ಮನೋಧೋರಣೆ ಬೇರೂರಿತ್ತು.  ಸರಕಾರಿ ಕಛೇರಿಗಳಲ್ಲಿ ಒಂದು ಶಿಸ್ತಿನ ಕೊರತೆ ಸದಾ ಎದ್ದು ಕಾಣುತ್ತಿತ್ತು.

ಗಡಾಫಿ ಕೊಟ್ಟ ಸೌಲತ್ತುಗಳ ಬಗ್ಗೆ ಇಲ್ಲಿನ ಬಹಳಷ್ಟು ಜನ ಈಗಲೂ ಹಾಡಿ ಹೊಗಳುತ್ತಾರೆ. ಆತ ಪ್ರತಿಯೊಬ್ಬ ಲಿಬಿಯನ್ ಒಂದು ಸ್ವಂತ ಮನೆ ಮತ್ತು ಸ್ವಂತ ಕಾರನ್ನು ಹೊಂದಿರಬೇಕೆಂದು ಕನಸು ಕಂಡಿದ್ದ ಮತ್ತದನ್ನು ಯಶಸ್ವಿಗೊಳಿಸಿದ್ದ ಕೂಡಾ. ಇದರ ಜೊತೆಗೆ ಅವರ ಶಿಕ್ಷಣ, ವೈದ್ಯಕೀಯ, ವಿದುತ್ಚಕ್ತಿ ಇನ್ನೂ ಮುಂತಾ ಸೌಲತ್ತುಗಳನ್ನು ಉಚಿತವಾಗಿ ಕೊಟ್ಟಿದ್ದ. ಆದರೆ ಅವರ ಸಂಬಳವನ್ನು ಒಂದು ಕುಟುಂಬಕ್ಕೆ ಎಷ್ಟು ಬೇಕಾಗುತ್ತಿತ್ತೋ ಅಷ್ಟನ್ನು ಮಾತ್ರ ಕೊಡುತ್ತಿದ್ದ. ಇದರ ಬಗ್ಗೆ ಕೆಲವರಲ್ಲಿ ಅಸಮಾಧಾನವಿತ್ತು.

ಲಿಬಿಯಾದ ಜನಸಂಖ್ಯೆ ಕೇವಲ ಐದು ಮಿಲಿಯನ್‍ ಆಗಿತ್ತು. ಆದರೆ ಅವ ಮಾತ್ರ ತೈಲ ಮಾರಾಟದಿಂದ ಬಂದ ಬಿಲಿಯನ್ ಡಾಲರ್‍ಗಳಷ್ಟು ಲಾಭವನ್ನು ಉದಾರವಾಗಿ ಸಂಬಳದ ರೂಪದಲ್ಲಿ ನಮಗೇ ಕೊಡುವದನ್ನು ಬಿಟ್ಟು ಇತರ ಆಫ್ರಿಕಾ ರಾಷ್ಟ್ರಗಳಾದ ಉಗಾಂಡ, ಪ್ಯಾಲೈಸ್ತೀನಾ, ಲೆಬನಾನ್, ಚಾದ್, ನೈಜೀರಿಯಾ, ನೈಜರ್, ಮಾಲಿ ಹಾಗೂ ಕ್ಯೂಬಾ ರಾಷ್ಟ್ರಗಳಿಗೆ ಸಹಾಯ ಮಾಡುವ ಅವಶ್ಯಕತೆ ಏನಿತ್ತು ಎಂದು ವಾದಿಸುತ್ತಾರೆ. (ನಿಮಗೆ ಗೊತ್ತಿರಲಿ ಗಡಾಫಿ ತನ್ನ ದೇಶದ ಹಣದಲ್ಲಿ ಈ ಎಲ್ಲ ರಾಷ್ಟ್ರಗಳಲ್ಲಿ ಒಳ್ಳೊಳ್ಳೆ ಸ್ಕೂಲು ಮತ್ತು ಆಸ್ಪತ್ರೆಗಳನ್ನು ಕಟ್ಟಿಸಿಕೊಟ್ಟಿದ್ದ.) ಗಡಾಫಿ ಬೇರೆಯವರಿಗೆ ಸಹಾಯ ಮಾಡುತ್ತಿದ್ದನಾದರೂ ಲಿಬಿಯನ್‍ರಿಗೆ ಮಾತ್ರ ಯಾವುದೇ ಕೊರತೆಯಾಗದಂತೆ ನೋಡಿಕೊಂಡಿದ್ದ. ಆದರೆ ಇಲ್ಲಿನ ಬಹಳಷ್ಟು ಯುವಕರು ತಮ್ಮ ಸಂಬಳವನ್ನು ಇಲ್ಲಿನ ವಿದೇಶಿ ಕೆಲಸ ಕೆಲಸಗಾರರಿಗೆ ಕೊಟ್ಟಷ್ಟನ್ನೇ ತಮಗೂ ಕೊಟ್ಟಿದ್ದರೆ ಇವನ ಗಂಟೇನು ಹೋಗುತ್ತಿತ್ತು ಎಂದು ವಾದಿಸುತ್ತಾರೆ.

ವಿಷಾದದ ಸಂಗತಿ ಏನೆಂದರೆ ಹಾಗೆ ಮಾತನಾಡುವ ಜನ ದುರಾಸೆಯ ಜನ. ಆತ ಅವರಿಗೆ ಮನೆ ಕಟ್ಟಿಸಿಕೊಟ್ಟಿದ್ದನ್ನು ಮತ್ತು ಅವರ ವಿದ್ಯಾಭ್ಯಾಸಕ್ಕಾಗಿ ಹಣ ಸುರಿದಿದ್ದನ್ನು ಮರೆಯುತ್ತಾರೆ.  ಹಾಗೆ ನೋಡಿದರೆ ಲಿಬಿಯಾದ ಜನತೆಗೆ ಸಿಕ್ಕಷ್ಟು ಸೌಲತ್ತುಗಳು ಇತರ ಅರಬ್ ರಾಷ್ಟ್ರಗಳ ಜನತೆಗೆ ಖಂಡಿತ ಸಿಕ್ಕಿರಲಿಲ್ಲ. ಕೆಲವು ಯುವಕರಂತೂ ತೈಲ ಮಾರಾಟದಿಂದ ಬಂದ ಲಾಭದಲ್ಲಿ ಖತಾರ್, ಜೋರ್ಡಾನ್, ಮತ್ತು ದುಬೈಗಳಲ್ಲಿರುವಂತೆ ಕ್ಲಬ್ಬುಗಳನ್ನು, ದೊಡ್ಡ ದೊಡ್ಡ ಶಾಪಿಂಗ್ ಮಾಲ್‍ಗಳನ್ನು ಸ್ಥಾಪಿಸಬಹುದಿತ್ತೆಂದು ಹೇಳುತ್ತಾರೆ. ಆದರೆ ಗಡಾಫಿಗೆ ಇವೆಲ್ಲಕಿಂತ ಹೆಚ್ಚಾಗಿ ಅವರ ಮೂಲಭೂತ ಅವಶ್ಯಕತೆಗಳನ್ನು ಪೂರೈಸುವದು ಮುಖ್ಯವಾಗಿತ್ತು. ಹಾಗೆಂದೇ ಇಲ್ಲಿ ಮಧ್ಯ ಮಾರಾಟ ಸಂಪೂರ್ಣವಾಗಿ ನಿಷೇಧವಾಗಿತ್ತು.

ಮನಸ್ಸು ಮಾಡಿದ್ದರೆ ಗಡಾಫಿ ಇದರ ಜೊತೆ ಜೊತೆಗೆ ಇತರೆ ಅಭಿವೃದ್ಧಿ ವಿಷಯಗಳತ್ತ ಗಮನ ಹರಿಸಬಹುದಿತ್ತೆಂದು ನನಗನಿಸುತ್ತದೆ. ಲಿಬಿಯಾದಲ್ಲಿ ಅಪಾರ ಹಣವಿತ್ತು. ಜನಸಂಖ್ಯೆ ಕಡಿಮೆ ಇತ್ತು. ಆ ಹಣದಿಂದ ಆತ ಉನ್ನತ ದರ್ಜೆಯ ಒಳ್ಳೊಳ್ಳೆ ಸ್ಕೂಲು, ಕಾಲೇಜು, ವಿಶ್ವವಿದ್ಯಾನಿಲಯ, ಆಸ್ಪತ್ರೆ, ಮೆಟ್ರೋ ರೈಲು, ವಿಮಾನನಿಲ್ದಾಣಗಳನ್ನು ಯಾವತ್ತೋ ಕಟ್ಟಿಸಿ ಇಡಿ ಅರಬ್ ರಾಷ್ಟ್ರಗಳಲ್ಲಿಯೇ ಮೊದಲ ಸ್ಥಾನದಲ್ಲಿರುವಂತೆ ನೊಡಿಕೊಳ್ಳಬಹುದಿತ್ತು. ಆದರೆ ಹಾಗೆ ಮಾಡದೇ ಬರೀ ಹೊರಗಿನವರಿಗೆ ಅಪಾರ ಹಣವನ್ನು ಪುಕ್ಕಟೆಯಾಗಿ ಕೊಟ್ಟುಬಿಟ್ಟ. ಅಲ್ಲಿ ಕ್ರಾಂತಿ ಏಳುವ ಮೂರು ವರ್ಷಗಳ ಮುಂಚೆಯಷ್ಟೇ ತನ್ನ ದೇಶವನ್ನು ಇತರೆ ಅರಬ ರಾಷ್ಟ್ರಗಳಂತೆ ಉನ್ನತ ದರ್ಜೆಗೆ ಏರಿಸುವ ಕಾರ್ಯವನ್ನು ಕೈಗೊಂಡು ಹತ್ತು ಹಲವು ಯೋಜನೆಗಳನ್ನು ರೂಪಿಸಿದ್ದನಾದರೂ ಅದು ತಡವಾಗಿತ್ತು ತೀರಾ ತಡವಾಗಿತ್ತು.

ಇದೆಲ್ಲದರ ನಡುವೆ 1988ರಲ್ಲಿ ಸ್ಕಾಟ್ಲೆಂಡ್‍ನ ಪಾನ್ ಅಮ್ ವಿಮಾನದಲ್ಲಿ ಬಾಂಬಿಟ್ಟ ಅರೋಪ ಲಿಬಿಯಾದ ಮೇಲೆ ಬರುತ್ತದೆ. ಆ ಘಟನೆಯಲ್ಲಿ ಸುಮಾರು 250 ಜನ ಅಮೆರಿಕನ್ನರು ಸತ್ತಿದ್ದರಿಂದ ಸಿಟ್ಟೆಗೆದ್ದ ಅಮೆರಿಕಾ ಸರಕಾರ ಲಿಬಿಯಾದ ಮೇಲೆ ಹನ್ನೆರೆಡು ವರ್ಷಗಳ ಕಾಲ ದಿಗ್ಬಂಧನ ಹೇರಿತು. ಆಗ ಲಿಬಿಯಾ ಆರ್ಥಿಕವಾಗಿ ಹನ್ನೆರೆಡು ವರ್ಷಗಳ ಕಾಲ ಸಂಕಷ್ಟದಲ್ಲಿ ಸಿಲುಕಿತು. ಆ ಸಮಯದಲ್ಲಿ ಗಡಾಫಿ ಅಕ್ಕಪಕ್ಕದ ರಾಷ್ಟ್ರಗಳಿಂದ ದಿನನಿತ್ಯದ ವಸ್ತುಗಳನ್ನು ಒಂದಕ್ಕೆ ಮೂರರಷ್ಟನ್ನು ಕೊಟ್ಟು ಕೊಂಡುಕೊಂಡು ಅದ್ಹೇಗೋ ದೇಶವನ್ನು ನಡೆಸಿದ ಮತ್ತು ಹೀಗಿದ್ದೂ ಆತ ತನ್ನ ದೇಶವನ್ನು ಒಂದೇ ಒಂದು ಪೈಸೆಯಷ್ಟು ಸಾಲದ ಋಣದಲ್ಲಿ ಮುಳುಗಿಸಲಿಲ್ಲ ಎಂದು ಇಲ್ಲಿನವರು ಹೇಳುತ್ತಾರೆ. ಆದರೆ ಆತನ ಬಗ್ಗೆ ಬಾಯಿಗೆ ಬಂದಂತೆ ಮಾತನಾಡುವ ಜನ ಇದ್ಯಾವುದನ್ನು ಪರಿಗಣಿಸುವದೇ ಇಲ್ಲ.

ಗಡಾಫಿ ಮಾಡಿದ ಇನ್ನೆರೆಡು ಅತಿ ದೊಡ್ಡ ತಪ್ಪುಗಳೆಂದರೆ ಅಮೆರಿಕನ್‍ರ ಮೇಲಿನ ಕೋಪಕ್ಕಾಗಿ ಇಂಗ್ಲಿಷ್ ಭಾಷೆಯ ಕಲಿಕೆಯನ್ನು ಹತ್ತು ವರ್ಷಗಳ ಕಾಲ ತನ್ನ ದೇಶದಿಂದ ನಿಷೇಧಿಸಿ ಒಂದು ತಲೆಮಾರನ್ನು ವಂಚಿಸಿಬಿಟ್ಟ. ಇದರಿಂದಾಗಿ ಅವರು ಇಂಗ್ಲೀಷ್ ಭಾಷೆಯ ಮುಖವನ್ನೇ ಕಾಣದಂತಾಯಿತು. ಅಲ್ಲದೇ ಇವತ್ತಿಗೂ ಆ ತಲೆಮಾರಿನ ಜನರಲ್ಲಿ ಈ ಭಾಷೆಯ ಬಗೆಗೆ ಒಂದು ತೆರದ ಫೋಬಿಯಾ ಇದೆ ಮತ್ತು ಅದರ ಬಗ್ಗೆ ಈಗಲೂ ಅವನ ಮೇಲೆ ಅವರಿಗೆ ಕೋಪ ಇದೆ. (ಇದರ ಬಗ್ಗೆ ನಾನು ನಿಮಗೆ ಈ ಹಿಂದೆ ಹೇಳಿದ್ದೇನೆ.) ಹಾಗೂ ಮುಸ್ಲಿಂ ಭಾತೃತ್ವದ ಆಧಾರದ ಮೇಲೆ ಇತರೆ ಮುಸ್ಲಿಂ ರಾಷ್ಟ್ರಗಳಾದ ಚಾದ್, ನೈಜರ್, ಸಿರಿಯಾ, ಈಜಿಪ್ಟ್, ಮಾಲಿ ಮುಂತದ ರಾಷ್ಟ್ರಗಳ ಜನರನ್ನು ತನ್ನ ದೇಶದಲ್ಲಿ ಬಂದು ನೆಲೆಯೂರುವಂತೆ ಆಹ್ವಾನಿಸಿದ್ದು. ಇವರೆಲ್ಲಾ ವೀಸಾ ಇಲ್ಲದೇ ಲಿಬಿಯಾಕ್ಕೆ ಬಂದು ಹೋಗಬಹುದಿತ್ತು. ಹಾಗೆ ಬಂದವರು ಇಲ್ಲೇ ಏನಾದರೊಂದು ಕೆಲಸ ಮಾಡುತ್ತಾ ಕ್ರಮೇಣ ಲಿಬಿಯಾದ ನಾಗರಿಕತ್ವವನ್ನು ಪಡೆದುಕೊಂಡು ಇಲ್ಲಿಯ ಸೌಲತ್ತುಗಳನ್ನು ಪಡೆದುಕೊಂಡರು. ದುರಂತವೆಂದರೆ ಗಡಾಫಿ ಇರುವವರೆಗೂ ಕಮಕ್ ಕಿಮಕ್ ಎನ್ನದ ಈ ಜನ ಇದೀಗ ಎದ್ದು ಕುಳಿತಿದ್ದಾರೆ. ತಮಗೂ ದೇಶದ ರಾಜಕಾರಣದಲ್ಲಿ ಪಾಲು ಬೇಕು ಎಂದು ಕೇಳುತ್ತಿದ್ದಾರಲ್ಲದೇ ಅಲ್ಲಲ್ಲಿ ದೇಶದ ಶಾಂತಿಗೆ ಭಂಗ ತರುವಂಥ ಕೆಲಸ ಮಾಡುತ್ತಿದ್ದಾರೆ.

ಲೇಖಕರ ಪರಿಚಯ:

2000 ರಲ್ಲಿ ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದಿಂದ ಇಂಗ್ಲೀಷ್ ಸಾಹಿತ್ಯದಲ್ಲಿ ಎಂ.. ಪದವಿಯನ್ನು ಪಡೆದಾದ ಮೇಲೆ ಬೆಂಗಳೂರಿನ ವಿವಿಧ ಪ್ರತಿಷ್ಟಿತ ಕಾಲೇಜುಗಳಲ್ಲಿ ಏಳು ವರ್ಷಗಳ ಕಾಲ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದರು. ತದನಂತರ ಲಿಬಿಯಾದ (ಉತ್ತರ ಆಫ್ರಿಕಾ) ಸೆಭಾ ವಿಶ್ವವಿದ್ಯಾನಿಲಯಕ್ಕೆ ಇಂಗ್ಲೀಷ್ ಉಪನ್ಯಾಸಕರಾಗಿ ಆಯ್ಕೆಗೊಂಡು 2007 ರಲ್ಲಿ ಅಲ್ಲಿಗೆ ಪಯಣ ಬೆಳೆಸಿದರು. ಅಲ್ಲಿ ಎಂಟು ವರ್ಷ ಸೇವೆ ಸಲ್ಲಿಸಿ 2015 ರಲ್ಲಿ ಭಾರತಕ್ಕೆ ಮರಳಿದರು. ಸಧ್ಯ ಅವರು ಚಿತ್ರದುರ್ಗದ ಎಸ್.ಆರ್.ಎಸ್ ಕಾಲೇಜಿನಲ್ಲಿ ಇಂಗ್ಲಿಷ್ ಉಪನ್ಯಾಸಕರಾಗಿ ಕೆಲಸ ಮಾಡುತ್ತಿದ್ದಾರೆ.

ಲಿಬಿಯಾದಲ್ಲಿರುವಾಗಲೇ ಅವರ ಬರವಣಿಗೆ ತೀವ್ರಗೊಂಡಿತು. ಪರಿಣಾಮವಾಗಿ ಅವರು ಅನೇಕ ಅರೇಬಿ ಕವನಗಳನ್ನು ಹಾಗೂ ವಿವಿಧ ಭಾಷೆಯ ಕಥೆಗಳನ್ನು ಕನ್ನಡಕ್ಕೆ ತಂದಿದ್ದಾರೆಲಿಬಿಯಾದ ಕ್ರಾಂತಿ ಹಾಗೂ ಅಲ್ಲಿನ ಅನುಭವಗಳನ್ನು ಕುರಿತಂತೆ 2018 ರಲ್ಲಿ ಹೊರಬಂದ ಇವರ ಚೊಚ್ಚಲ ಕೃತಿಲಿಬಿಯಾ ಡೈರಿಓದುಗರಿಂದ ಅಪಾರ ಮೆಚ್ಚುಗೆಯನ್ನು ಗಳಿಸಿದೆ. ಜೊತೆಗೆ ಇವರ ಇನ್ನೆರೆಡು ಕೃತಿಗಳಾದ  “ಶೇಕ್ಸ್ಪಿಯರನ ಶ್ರೀಮತಿಮತ್ತು ಅಸ್ಸಾಮಿ ಕವನಗಳ ಅನುವಾದಿತ ಕವನ ಸಂಕಲನನನ್ನ ಚಹಾ ತೋಟ ಮತ್ತು ನೀಲಿಹಕ್ಕಿಹೊರಬಂದಿವೆ.

Share