Connect with us


      




ವಿದೇಶ

ಯುಕೆಯಲ್ಲಿ 1,50,000 ಸಾವು – ಪ್ರಧಾನಿ ಬೋರಿಸ್ ಜಾನ್ಸನ್ ಶೋಕ

Iranna Anchatageri

Published

on

ಲಂಡನ್ : ಜನೆವರಿ 09 (ಯು.ಎನ್.ಐ.) ಕೋವಿಡ್ ಸೋಂಕು ಯುನೈಟೆಡ್ ಕಿಂಗ್ ಡಮ್ ಅನ್ನು ಜರ್ಜರಿತವಾಗಿಸಿದೆ. ಬ್ರಿಟನ್ ನಲ್ಲಿ ಈವರೆಗೆ ಸೋಂಕಿನಿಂದ 1 ಲಕ್ಷ 50 ಸಾವಿರ ಮಂದಿ ಅಸುನೀಗಿದ್ದಾರೆ ಎಂದು ಪ್ರಧಾನಿ ಬೋರಿಸ್ ಜಾನ್ಸನ್ ಶೋಕ ವ್ಯಕ್ತಪಡಿಸಿದ್ದಾರೆ.

ಪ್ರಪಂಚದ ಇತರ ಭಾಗಗಳಂತೆ  ಬ್ರಿಟನ್ ಪ್ರಸ್ತುತ ಕೊರೊನಾ ವೈರಸ್‌ನ ದಾಖಲೆಯ ಪ್ರಕರಣಗಳನ್ನು ಎದುರಿಸುತ್ತಿದೆ. ದೇಶದಲ್ಲಿ ಕೊರೊನಾ ವೈರಸ್‌ನಿಂದ 1,50,000 ಕ್ಕೂ ಹೆಚ್ಚು ಜನರು ಸಾವಿಗೀಡಾಗಿದ್ದಾರೆ ಎಂದು ಸರ್ಕಾರ ಹೇಳಿದೆ. ವೈರಸ್‌ ಹೊಡೆತಕ್ಕೆ ಸಿಲುಕಿರುವ ಯುರೋಪಿನ ದೇಶಗಳಲ್ಲಿ ಬ್ರಿಟನ್ ಕೂಡ ಒಂದು. ಟ್ವಿಟರ್‌ನಲ್ಲಿ ಸಂದೇಶವನ್ನು ಪೋಸ್ಟ್ ಮಾಡಿರುವ ಪ್ರಧಾನಿ ಬೋರಿಸ್ ಜಾನ್ಸನ್, “ನಮ್ಮ ದೇಶದಲ್ಲಿ ಕೊರೊನಾ ವೈರಸ್‌ನಿಂದ ಸಾವನ್ನಪ್ಪಿದವರ ಸಂಖ್ಯೆ ಭಯಾನಕ ಸ್ಥಿತಿಯಲ್ಲಿ ಬೆಳಕಿಗೆ ಬಂದಿದೆ. ಇಲ್ಲಿಯವರೆಗೆ ದಾಖಲಾದ ಒಟ್ಟು ಸಾವಿನ ಸಂಖ್ಯೆ 150,000 ತಲುಪಿದೆ” ಎಂದು ಹೇಳಿದ್ದಾರೆ.

ಕಪ್ಪು ಬ್ಯಾಕ್ ಗ್ರೌಂಡ್ ನಲ್ಲಿ ಸಂದೇಶವನ್ನು ಹಂಚಿಕೊಂಡಿರುವ ಜಾನ್ಸನ್ “ಕೊರೊನಾ ವೈರಸ್‌ನಿಂದ ಪ್ರಾಣ ಕಳೆದುಕೊಂಡವರ ಪ್ರತಿಯೊಂದು ಕುಟುಂಬಗಳು, ಸ್ನೇಹಿತರು ಮತ್ತು ಸಮುದಾಯಗಳಿಗೆ ಅಪಾರವಾದ ನಷ್ಟವಾಗಿದೆ. ಅವರಿಗೆ ನನ್ನ ಸಂತಾಪಗಳು.” ಎಂದು ಹೇಳಿದ್ದಾರೆ. ಅಲ್ಲದೆ, ಕೊರೊನಾ ಮೇಲೆ ಹಿಡಿತ ಸಾಧಿಸಬೇಕೆಂದರೆ ಬ್ರಿಟನ್ ನ ಎಲ್ಲ ನಾಗರಿಕರು ಬೂಸ್ಟರ್ ಹಾಗೂ ಲಸಿಕೆ ಡೋಸ್ ಗಳನ್ನು ಶೀಘ್ರ ಪಡೆಯಬೇಕು ಎಂದು ಮನವಿ ಮಾಡಿದ್ದಾರೆ.

2 ಲಕ್ಷಕ್ಕೂ ಹೆಚ್ಚು ಪ್ರಕರಣಗಳು ಪತ್ತೆ

ಯುಕೆಯಲ್ಲಿನ ದೈನಂದಿನ ಪ್ರಕರಣಗಳ ಸಂಖ್ಯೆ ಕಳೆದ ವಾರ 2 ಲಕ್ಷಕ್ಕಿಂತ ಅಧಿಕ ಪ್ರಮಾಣದಲ್ಲಿದ್ದವು. ಆದರೆ ಕಳೆದ 24 ಗಂಟೆಗಳಲ್ಲಿ ವರದಿಯಾದ ಪ್ರಕರಣಗಳ ಸಂಖ್ಯೆ 1,46,390ಕ್ಕೆ ಇಳಿದಿದೆ. ಕಡ್ಡಾಯವಾಗಿ ಫೇಸ್ ಮಾಸ್ಕ್ ಧರಿಸುವುದು ಸೇರಿದಂತೆ ಕಟ್ಟುನಿಟ್ಟಾದ ನಿಯಮಗಳನ್ನು ದೇಶದಲ್ಲಿ ಜಾರಿಗೆ ತರಲಾಗಿದೆ. ಆದಾಗ್ಯೂ, ಹಬ್ಬಗಳ ಸಮಯದಲ್ಲಿ ಇಂಗ್ಲೆಂಡ್‌ನಲ್ಲಿ ಸಾಮಾಜಿಕ ಅಂತರ ಕಾಪಾಡದಿದ್ದಾಗ ಪ್ರಧಾನಿ ಜಾನ್ಸನ್ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಇದರಿಂದ ಇಂಗ್ಲೆಂಡ್ ನಾಗರಿಕರು ಪ್ರಧಾನಿ ವಿರುದ್ಧ ತೀವ್ರ ಆಕ್ರೋಶ ಹೊರ ಹಾಕಿದ್ದರು. ಜನರ ನಿರ್ಲಕ್ಷ್ಯದಿಂದಲೇ ದೇಶದ ಆರೋಗ್ಯ ವ್ಯವಸ್ಥೆಯ ಮೇಲೆ ದುಷ್ಪರಿಣಾಮ ಬೀರಿದೆ. ಇದರಿಂದ ಸರ್ಕಾರದ ವೆಚ್ಚ ಮತ್ತು ಹೊರೆ ಎರಡೂ ಹೆಚ್ಚಾಗತೊಡಗಿದೆ. ಕೋವಿಡ್ ಸೋಂಕಿತರ ಸಂಖ್ಯೆ ಏರುಗತಿಯಲ್ಲಿ ಸಾಗುತ್ತಿರುವ ಹಿನ್ನೆಲೆಯಲ್ಲಿ ಆಸ್ಪತ್ರೆಗಳ ಸಹಾಯಕ್ಕಾಗಿ ಸೇನೆ ನಿಯೋಜನೆ ಮಾಡಲು ಸರ್ಕಾರ ನಿರ್ಧರಿಸಿದೆ.

Share