Connect with us


      
ಅಂಕಣ

ಕಾಶಿಗೆರಡು ಕಾಲ!

Kumara Raitha

Published

on

ಲೇಖಕರು: ರಾಧಿಕಾ ವಿಟ್ಲ

ಅಂಕಣದ ಹೆಸರು- ಒಂದೂರಲ್ಲಿ ಒಂದಿನ!

ಕಳೆದ ಚಳಿಗಾಲದಲ್ಲಿ ಕಾಶಿಗೆ ಹೋದಾಗ, ಕಾಶಿಯನ್ನು ನೋಡುವುದಿದ್ದರೆ ಕನಿಷ್ಟ ಎರಡು ಬಾರಿಯಾದರೂ ನೋಡಬೇಕು ಅನಿಸಿತ್ತು. ಒಮ್ಮೆ ಬೇಸಗೆಯಲ್ಲಿ ಇನ್ನೊಮ್ಮೆ ಚಳಿಗಾಲದಲ್ಲಿ! ಕಾರಣ ಒಂದು ಗಂಗಾರತಿ. ಇನ್ನೊಂದು ಗಂಗೆ. ಇವೆರಡು ವಿಷಯ ಬಿಟ್ಟರೆ ಕಾಶಿ ಮಳೆ, ಚಳಿ, ಬಿಸಿಲಿಗೆ, ಜಗ್ಗದೆ, ಕುಗ್ಗದೆ, ಬದಲಾಗದೆ ಹಾಗೆಯೇ ವರ್ಷಾನುಗಟ್ಟಲೆ ಇದ್ದು ಬಿಡುತ್ತದೆ. ಎಷ್ಟೇ ಚಳಿಯಲ್ಲೂ, ಎಷ್ಟೇ ಮಳೆಯಲ್ಲೂ, ಎಷ್ಟೇ ಬಿಸಿಲಿದ್ದರೂ ಭಕ್ತಿಯಿಂದ ಮುಳುಗೇಳುವ ಮಂದಿ ಮುಳುಗೇಳುತ್ತಲೇ ಇರುತ್ತಾರೆ ನಿತ್ಯಕರ್ಮವೆಂಬಂತೆ.

ಹಾಗಾದರೆ, ಚಳಿಗಾಲದ ಗಂಗೆಗೂ ಬೇಸಗೆಯ ಗಂಗೆಗೂ, ಚಳಿಗಾಲದ ಗಂಗಾರತಿಗೂ ಬೇಸಗೆಯ ಗಂಗಾರತಿಗೂ ಏನು ವ್ಯತ್ಯಾಸವಿದ್ದೀತಪ್ಪಾ ಅಂತನಿಸುವುದು ಸಹಜ. ಮೊದಲು ಗಂಗೆಯ ವಿಚಾರಕ್ಕೆ ಬರೋಣ. ನಾವು ಬೆಳ್ಳಂಬೆಳಗ್ಗೆ ಯಾವುದೇ ಘಾಟಿನ ಮೆಟ್ಟಿಲ ತುದಿಯಲ್ಲಿ ನಿಂತರೆ, ಆ ತುದಿಯಲ್ಲಿ ಉದಯಿಸುವ ಸೂರ್ಯ ವಿಶಾಲ ಗಂಗೆಯ ಮಡಿಲಿಗೆ ಹೊಂಬಣ್ಣವನ್ನು ಚೆಲ್ಲಿದಾಗ, ಆ ಹೊಂಬಣ್ಣದಲ್ಲಿ ಹೊಳೆವ ಗಂಗೆ, ತೇಲುವ ದೋಣಿಗಳು ಬೇರೆಯದೇ ಪ್ರಪಂಚ ಸೃಷ್ಟಿ ಮಾಡುವುದು ಬೇಸಗೆಯಲ್ಲಿ. ಮಳೆಗಾಲದಲ್ಲೂ ಕೂಡಾ ಇದು ಧಾರಳವಾಗಿಯೇ ಸಿಗುತ್ತದೆ.

ಆದರೆ, ಚಳಿಗಾಲದಲ್ಲಿ, ಕಾಶಿ ತನ್ನ ಚೆಹರೆಯನ್ನು ಬದಲಾಯಿಸಿಬಿಡುತ್ತದೆ. ಮಳೆಗಾಲದಲ್ಲಿ ಘಾಟುಗಳ ಅಷ್ಟೂ ಮೆಟ್ಟಿಲುಗಳನ್ನು ಮೀರಿ ತುಂಬಿ ಹರಿಯುತ್ತಿದ್ದ ಗಂಗೆ ನಿಧಾನಕ್ಕೆ ಶಾಂತವಾಗುತ್ತಾ ಮೆಟ್ಟಿಲಿಳಿದು ಹರಿಯ ತೊಡಗುತ್ತಾಳೆ. ಹೊಂಬಣ್ಣದ ಸೂರ್ಯ ಬೆಳ್ಳಗಾದ ಮೇಲಷ್ಟೆ ಮುಖದರ್ಶನ ಕೊಡಲು ಶುರು ಮಾಡುತ್ತಾನೆ. ಇಡೀ ಕಾಶಿ ಮಬ್ಬಿನಲ್ಲಿ ಮುಚ್ಚಿಹೋಗಿ, ಭೆಳ್ಳಂಬೆಳಗ್ಗೆ ಘಾಟ್‌ಗಳಿಗೆ ಬಂದರೆ, ತೀರದುದ್ದಕ್ಕೂ ನಿಂತಿರುವ ದೋಣಿಗಳೆಲ್ಲವೂ ತಮ್ಮ ಅರ್ಧವನ್ನಷ್ಟೆ ತೋರಿಸಿ ಇನ್ನರ್ಧ ಅಂತರ್ಧಾನವಾಗಿಸಿಬಿಟ್ಟಿರುತ್ತವೆ. ಇನ್ನು ನಾವು ಚಳಿಯಲ್ಲಿ ಗಡಗಡ ನಡುಗುತ್ತಾ ಮೈಯನ್ನು ಮುದ್ದೆಯಾಗಿಸಿಕೊಂಡು ಜಾಕೆಟ್ಟಿನ ಪಾಕೆಟ್ಟಿನಲ್ಲಿ ಕೈ ಇಳಿಬಿಟ್ಟು ನಡೆಯುತ್ತಿದ್ದರೆ, ಇದ್ಯಾವುದರ ಪರಿವೆಯೇ ಇಲ್ಲವೆಂಬಂತೆ ಗಂಗೆಯಲ್ಲಿ ಮುಳುಗೇಳುವ ಸಾಧುಗಳು ತಮ್ಮ ಉದ್ದದ ಜಟೆಯಿಂದ ತೊಟ್ಟಿಕ್ಕುವ ನೀರನ್ನು ಹಿಂಡಿ ತೆಗೆಯುತ್ತಾ ತುಂಡುಬಟ್ಟೆಯಲ್ಲಿ ಮೆಟ್ಟಿಲೇರುತ್ತಾ ಬರುವ ಬದುಕಿನ ಶಿಸ್ತೇ ಭಕ್ತಿಯಾಗಿ, ಭಕ್ತಿಯೇ ಶಿಸ್ತಾಗಿ ಕಂಡು ಸೋಜಿಗವೆನಿಸುತ್ತದೆ.

ಘಾಟುಗಳ ಮೆಟ್ಟಿಲುಗಳೆಲ್ಲ ಆಗಸದಲ್ಲೋ, ನೆಲದಲ್ಲೋ ಮಂಜಾಗಿ ಕರಗಿ ಹೋದಂತೆ ಕಂಡು, ನಿನ್ನೆಯಷ್ಟೆ ರಾತ್ರಿ ಬಣ್ಣಬಣ್ಣದ ಬೆಳಕಿನಲ್ಲಿ ಮಿರಮಿರ ಹೊಳೆಯುತ್ತಿದ್ದ ವಿಶಾಲ ಗಂಗೆ, ಈ ಬೆಳಗಿನಲ್ಲಿ ಎಲ್ಲಿ ಕಾಣೆಯಾದಳು ಅನಿಸಿಬಿಡುವಷ್ಟು ಮಾಯವಾಗಿರುತ್ತಾಳೆ. ಇಂತಹ ಸೋಜಿಗದಲ್ಲಿ ಪುಳಕಗೊಂಡು ಸಾಗುತ್ತಿರಬೇಕಾದರೆ, ಇದ್ದಕ್ಕಿದ್ದಂತೆ ಮುಸುಕಿರುವ ಮಂಜಿನಿಂದ ಅಸ್ಪಷ್ಟ ಆಕೃತಿಗಳು ಧುತ್ತೆಂದು ಪ್ರತ್ಯಕ್ಷವಾದಂತೆ ನಮ್ಮೆದುರು ಸಾಗಿಹೋಗುವ ಸಾಧುಗಳು ಕಾಶಿಗೊಂದು ಅಪೂರ್ವ ದೈವಿಕ ಸ್ಪರ್ಶ ನೀಡಿಬಿಡುತ್ತಾರೆ. ಹಾಗಾಗಿ, ಸುಮ್ಮನೆ ಇವೆಲ್ಲವನ್ನೂ ಒಳಗಿಳಿಸಿಕೊಳ್ಳುತ್ತಾ ಸಾಗುವವರಿಗೂ, ಕ್ಯಾಮರಾ ಹೆಗಲಿಗೇರಿಸಿಕೊಂಡು ಕಾಶಿಯನ್ನು ಫ್ರೇಮುಗಳಲ್ಲಿ ಹಿಡಿದಿಡಬಯಸುವವರಿಗೂ, ಹೊಂಬಣ್ಣದ ಬೆಳಗೂ, ಬೆಳ್ಳನೆ ಮಬ್ಬೂ ಅನೂಹ್ಯ ಜಗತ್ತನ್ನೇ ಸೃಷ್ಟಿ ಮಾಡಿಬಿಡುತ್ತದೆ.

ಇನ್ನು ಕಾಶಿಯಲ್ಲಿ ಎರಡೂ ಕಾಲಗಳಲ್ಲಿ ನೋಡಬೇಕಾದ್ದು ಗಂಗಾರತಿ ಎಂಬ ಉತ್ಸವ! ಗಂಗೆಯೆಂದರೆ ಭಾರತೀಯರಿಗೆ ಕೇವಲ ಒಂದು ನದಿಯಲ್ಲ. ಅದೊಂದು ಸಂಸ್ಕೃತಿ. ದೇಶದ ಪ್ರತಿಯೊಂದು ಊರೂ ಆಯಾ ಊರಿನ ನದಿ ತೊರೆಗಳ ಬಗ್ಗೆ ಈ ಭಾವವನ್ನು ಹೊಂದಿದ್ದರೂ, ಗಂಗೆಗೆ ಪರಮೋಚ್ಛ ಸ್ಥಾನ. ಹಾಗಾಗಿಯೇ ಆಕೆಗೆ ಅರ್ಪಿಸುವ ಪರಮೋಚ್ಛ ಗೌರವ ಈ ಆರತಿ ಎಂಬ ನಂಬಿಕೆ. ಗಂಗೆ ಸಿಕ್ಕಿದ ಮರುಜನ್ಮದ ದಿನವೆಂದೇ ನಂಬುವ ಗಂಗಾ ಸಪ್ತಮಿ ಹಾಗೂ ಕಾರ್ತಿಕ ಹುಣ್ಣಿಮೆಗಳಂದು ಈ ಆರತಿ ಇನ್ನೂ ವಿಶೇಷ ಬಗೆಯದ್ದೆಂದು ಅದಕ್ಕೆ ವಿಶೇಷ ಸ್ಥಾನ ನೀಡಿದರೂ, ಪ್ರತಿನಿತ್ಯದ ಗಂಗಾರತಿ ಕಾಶಿ, ಹರಿದ್ವಾರ, ಹೃಷಿಕೇಷಗಳಲ್ಲಿ ನಮ್ಮ ನಿತ್ಯಕರ್ಮಗಳಷ್ಟೇ ಸಹಜ.

ಗಂಗೆಯೆಂಬ ನದಿಗೆ ಪ್ರತಿದಿನ ಆರತಿ ಎಂಬ ಕಲ್ಪನೆಯೇ ಒಂದು ಸುಂದರ ಅನುಭೂತಿ. ಇದರಲ್ಲಿ ಪಾಲ್ಗೊಳ್ಳುವುದೇ ಒಂದು ದಿವ್ಯ ಅನುಭವ. ಕೆಲವರಿಗದು ಕೇವಲ ಆಧ್ಯಾತ್ಮಿಕ ಅನುಭೂತಿಯಾದರೆ, ಇನ್ನು ಕೆಲವರಿಗದು ಸಾಂಸ್ಕೃತಿಕ ವೈಭವ. ಅವರವರ ಭಾವಕ್ಕೆ ನಿಲುಕುವ ಹಾಗೆ, ಒಬ್ಬೊಬ್ಬರಿಗೆ ಒಂದೊಂದು. ಹರಿದ್ವಾರದಲ್ಲೂ, ಹೃಷಿಕೇಶದಲ್ಲೂ ಗಂಗಾರತಿಯನ್ನು ನೋಡಿದವರಿಗೆ ಕಾಶಿಯ ಗಂಗಾರತಿ ಸ್ವಲ್ಪ ಭಿನ್ನ ಅನುಭವ. ಹರಿದ್ವಾರದಲ್ಲೂ, ಹೃಷಿಕೇಶದಲ್ಲೂ ಗಂಗಾರತಿ ಸಾಂಪ್ರದಾಯಿಕವಾಗಿ ನಡೆದರೆ, ಕಾಶಿಯಲ್ಲಿ ಅದೊಂದು ದೊಡ್ಡ ಉತ್ಸವ.

ವಿಶ್ವನಾಥ ಮಂದಿರದ ಪಕ್ಕದಲ್ಲೇ ಇರುವ ಹಾಗೂ ಎಲ್ಲ ಘಾಟುಗಳಿಗಿಂತಲೂ ಬಹುಮುಖ್ಯವೆಂದೆ ಪರಿಭಾವಿಸುವ ದಶಾಶ್ವಮೇಧ ಘಾಟಿನಲ್ಲಿ ಸಂಜೆಯಾದಂತೆ, ಗಂಗಾರತಿಗಾಗಿ ಕಾಶಿಯ ಗಲ್ಲಿಗಳೂ, ಘಾಟುಗಳೂ ಬದಲಾಗುವುದನ್ನು ನೋಡಬೇಕು. ಅಷ್ಟೂ ಹೊತ್ತು ಎಲ್ಲರನ್ನೂ ಹೊತ್ತುಕೊಂಡು ಗಂಗೆಯ ಮೇಲೆ ತೇಲುವ ದೋಣಿಗಳು, ಮುಸ್ಸಂಜೆಯಾಗುತ್ತಿದ್ದಂತೆ ಆರತಿ ನಡೆಯುವ ವೇದಿಕೆಗೆ ಅಭಿಮುಖವಾಗಿ ಒಂದು ಜಾಗದಲ್ಲಿ ನಿಲ್ಲಲು ಶುರು ಮಾಡುತ್ತವೆ. ವೇದಿಕೆಯ ಅಕ್ಕಪಕ್ಕ, ಕಟ್ಟಡಗಳ ಛಾವಣಿ, ಗಂಗೆಯ ಮೇಲಿನ ದೋಣಿಗಳೆಲ್ಲವೂ ಜನರಿಂದ ಕಿಕ್ಕಿರಿಯಲಾರಂಭಿಸುತ್ತದೆ. ಶಿವನ ವೇಷ ಹಾಕಿ ಭಿಕ್ಷೆ ಎತ್ತುವ ಮಕ್ಕಳೂ, ಹಾವಾಡಿಸುವ ಹಾವಾಡಿಗರೂ, ಭಸ್ಮ ಬಳಿದುಕೊಂಡು ಜೈ ಭೋಲೇನಾಥ್‌ ಎನ್ನುವವರೂ, ಪುಟ್ಟಪುಟ್ಟ ಪೇಪರ್‌ ಬೋಗುಣಿಗಳಲ್ಲಿ ಒಂದಿಷ್ಟು ಹೂವನ್ನೂ ಹಣತೆಯೊಂದನ್ನೂ ಇಟ್ಟು ಗಂಗೆಯಲ್ಲಿ ತೇಲಿಬಿಡಲು ನಮ್ಮ ಹಿಂದೆ ದುಂಬಾಲು ಬೀಳುವವರೂ ಎಲ್ಲರಿಗೂ ಸೇರಿ ಗಂಗಾರತಿಯೊಂದು ಪ್ರತಿದಿನದ ಹಬ್ಬ.

ಸಾಂಪ್ರದಾಯಿಕ ದಿರಿಸಿನಲ್ಲಿ ವೇದಿಕೆಗೆ ಕಾಲಿಡುವ ಪೂಜಾರಿಗಳು ಕ್ರಮಬದ್ಧವಾದ ತಾಲೀಮಿನೊಂದಿಗೆ ಆರತಿ ಆರಂಭಿಸುತ್ತಾನೆ. ಲೌಡ್‌ ಸ್ಪೀಕರಿನಲ್ಲಿ ಮೊಳಗುವ ಭಕ್ತಿಗೀತೆಗೆ ಸರಿಯಾಗಿ ಸಾಗುವ ಬಗೆಬಗೆಯ ಆರತಿಗಳು ಒಂದು ಸುಮಾರು ಒಂದು ಗಂಟೆಯ ಕಾಲ ಮುಂದುವರಿಯುತ್ತದೆ.

ಇದರಲ್ಲಿ ಚಳಿಗಾಲಕ್ಕೂ, ಉಳಿದ ಕಾಲಕ್ಕೂ ಬದಲಾವಣೆ ಕಾಣೋದು ಇವರ ಸಾಂಪ್ರದಾಯಿಕ ದಿರಿಸಿನಲ್ಲಿ ಬಿಟ್ಟರೆ ಬೇರೆ ವ್ಯತ್ಯಾಸವಿಲ್ಲ. ಆದರೆ ಆರತಿ ನಡೆಸುವ ಪೂಜಾರಿಗಳು ಬದಲಾಗುತ್ತಲೇ ಇರುತ್ತಾರೆ ಎಂಬುದು ಮೂರ್ನಾಲ್ಕು ದಿನ ಆರತಿ ನೋಡಿದ ಮೇಲೆ ಗೊತ್ತಾಯಿತು. ಬೇರೆ ದಿನಗಳಲ್ಲಿ ತಿಳಿ ಗುಲಾಬಿ/ಕೇಸರಿ ರೇಷ್ಮೆ ಬಟ್ಟೆಯಲ್ಲಿ ಆರತಿ ನಡೆಸುವ ಪೂಜಾರಿಗಳು, ಚಳಿಗಾಲದಲ್ಲಿ ಕಡುಗೆಂಪು ಬಣ್ಣದ ಉದ್ದ ತೋಳಿನ ಸ್ವೆಟರ್‌ ಧರಿಸಿ, ಪಂಚೆ ಶಲ್ಯದೊಂದಿಗೆ ಆರತಿ ನಡೆಸುವುದು ವಿಶೇಷ. ಈ ಎರಡೂ ಮಾದರಿಗಳು ಆಯಾ ಕಾಲದ ಹವಾಮಾನಕ್ಕೆ ತಕ್ಕಂತೆ ಬದಲಾವಣೆ ಮಾಡಿದ್ದರೂ, ಸಾಂಪ್ರದಾಯಿಕ ಆಚರಣೆಯೊಂದಕ್ಕೆ ಆರಿಸಿಕೊಂಡ ಈ ಚಳಿಗಾಲದ ದಿರಿಸಿನ ಬಣ್ಣ ನನ್ನನ್ನು ಹೆಚ್ಚು ಆಕರ್ಷಿಸಿತು. ಗಂಗಾರತಿಯನ್ನು ಸೆರೆಹಿಡಿವ ಆಸೆಯಿರುವ ಛಾಯಾಗ್ರಾಹಕರೂ ಕೂಡಾ, ಚಳಿಗಾಲವನ್ನು ಈ ದಿರಿಸಿಗಾಗಿಯಾದರೂ ಪರಿಗಣಿಸಬೇಕು.

ಗಂಭೀರತೆಯಿಂದ ನಡೆಸುವ ಈ ಆರತಿಯಲ್ಲೂ ಕೂಡ ಭಾವ ಹುಡುಕುವುದು ಛಾಯಾಗ್ರಾಹಕರಿಗೆ ಒಂದು ದೊಡ್ಡ ಸವಾಲು.‌ ಅಂಥ ಹುಡುಕಾಟದಲ್ಲಿ ದಕ್ಕಿದ ಉದ್ದ ಕೂದಲು ಬಿಟ್ಟ ಈ ಪೂಜಾರಿಯ ಭಾವಪೂರ್ಣ ಆರತಿ ನನ್ನನ್ನು ಹೆಚ್ಚು ಸೆಳೆಯಿತು. ಆ ದಿನ ಅವರ ಭಾವ ಭಂಗಿಯ ಆರತಿಯೇ ಮರುದಿನವೂ, ಆರತಿಯೆಂಬ ಈ ಸಾಂಸ್ಕೃತಿಕ ಉತ್ಸವಕ್ಕೆ ಕ್ಯಾಮರಾ ಸಮೇತ ನನ್ನನ್ನು ಸೆಳೆದು ಕೂರಿಸಿತ್ತು. ಒಂದಿಷ್ಟು ಭಾವಪೂರ್ಣ ಛಾಯಾಚಿತ್ರಗಳೊಂದಿಗೆ ಗಂಗಾರತಿಯನ್ನು ದಕ್ಕಿಸಿಕೊಂಡ ಸಾರ್ಥಕ್ಯವೂ ಕೂಡಾ ಮತ್ತೆ ಮತ್ತೆ ಕಾಶಿಯತ್ತ ಸೆಳೆಯುತ್ತಲೇ ಇದೆ, ಇರುತ್ತದೆ ಕೂಡ.

ಲೇಖಕರ ಪರಿಚಯ: ರಾಧಿಕಾ ವಿಟ್ಲ ಅವರು ಕನ್ನಡನಾಡಿನ ಕರಾವಳಿಯವರು (ದಕ್ಷಿಣ ಕನ್ನಡ ಜಿಲ್ಲೆ) ಮೂಲತಃ ಪತ್ರಕರ್ತರು. ಇವರ ಬರೆಹಗಳಲ್ಲಿ ಕ್ಯಾಮೆರಾ ಕಣ್ಣಿನ ಸ್ಪಷ್ಟತೆ ಇರುತ್ತದೆ. ಇದು ಅತಿಶೋಕ್ತಿಯಲ್ಲ. ಇವರು ಅನನ್ಯ ಛಾಯಾಗ್ರಾಹಕರೂ ಹೌದು ಎಂಬುದು ಖಂಡಿತ ಕಾಕಾತಾಳೀಯ ಅಲ್ಲ. ಇವರ ಕ್ಯಾಮೆರಾ ಕಣ್ಣಿನಲ್ಲಿ ಸೆರೆಯಾದ ಚಿತ್ರಗಳನ್ನು ನೋಡುವುದು ಸೊಗಸು. ಇವರು ಪ್ರವಾಸಿ ಪ್ರಿಯೆ. ದೇಶ-ವಿದೇಶಗಳನ್ನು ಸದಾ ಸುತ್ತುವ, ಕಂಡಿದ್ದನ್ನು ದಾಖಲಿಸುವ ಪ್ರವೃತ್ತಿ ಉಳ್ಳವರು. ಇವರು “ಒಂದೂರಲ್ಲಿ ಒಂದಿನ” ಹೆಸರಿನಲ್ಲಿ ಬರೆಯುವ ಅಂಕಣ ರಾಷ್ಪ್ರದ ಹಳೆಯ – ಪ್ರತಿಷ್ಠಿತ ಯು.ಎನ್.ಐ. ನಲ್ಲಿ  ಪ್ರತಿ ಭಾನುವಾರದಂದು ಪ್ರಕಟವಾಗುತ್ತದೆ ಎಂದು ತಿಳಿಸಲು ಸಂತೋಷವಾಗುತ್ತದೆ

  • ಸ್ಥಾನಿಕ ಸಂಪಾದಕ

Share