Published
7 months agoon
By
UNI Kannadaವಾರಣಾಸಿ, ಜ 8(ಯುಎನ್ ಐ) -ಹಿಂದೂಯೇತರರು ಗಂಗಾ ನದಿಯ ಘಾಟ್ಗಳು, ನದಿ ದಡದಲ್ಲಿರುವ ದೇವಾಲಯಗಳಿಂದ ದೂರವಿರುವಂತೆ ಎಚ್ಚರಿಕೆ ನೀಡುವ ಪೋಸ್ಟರ್ಗಳು ಕಾಶಿಪುರದ ಬೀದಿಗಳಲ್ಲಿ ಕಾಣಿಸಿಕೊಂಡಿವೆ. ಪೋಸ್ಟರ್ ಗಳನ್ನು ಕೂಡಲೇ ತೆರವುಗೊಳಿಸಿರುವ ಪೊಲೀಸರು ಈ ಸಂಬಂಧ ತನಿಖೆ ನಡೆಸುತ್ತಿದ್ದಾರೆ. ಇವುಗಳ ಹಿಂದೆ ರಾಷ್ಟ್ರೀಯವಾದಿ ಸಂಘಟನೆಗಳ ಕೈವಾಡ ಇರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಗಂಗಾ ನದಿಯ ಘಟ್ಟಗಳು, ಕಾಶಿ ದೇವಾಲಯಗಳು ಸನಾತನ ಧರ್ಮ, ಭಾರತೀಯ ಸಂಸ್ಕೃತಿ, ವಿಶ್ವಾಸ ಹಾಗೂ ನಂಬಿಕೆ ಸಂಕೇತಗಳಾಗಿವೆ. ಇವುಗಳ ಮೇಲೆ ನಂಬಿಕೆ ಇರುವವರಿಗೆ ಮಾತ್ರ ಸ್ವಾಗತ, ವಿಶ್ವಾಸವಿಲ್ಲದವರಿಗೆ ಇವುಗಳು ಪಿಕ್ ನಿಕ್ ಸ್ಥಳಗಳಲ್ಲ ಎಂಬುದನ್ನು ತಿಳಿದುಕೊಳ್ಳಿ ಎಂದು ಆ ಪೋಸ್ಟರ್ ಗಳಲ್ಲಿ ಬರೆಯಲಾಗಿದೆ.
ಈ ಸ್ಥಳಗಳಿಗೆ ಹಿಂದೂಯೇತರರ ಪ್ರವೇಶ ನಿಷಿದ್ದ ಎಂಬ ಶೀರ್ಷಿಕೆ ನೀಡಲಾಗಿದೆ. ಇದು ಮನವಿಯಲ್ಲ, ಎಚ್ಚರಿಕೆ ಎಂಬ ಬೆದರಿಕೆಯೂ ಇವೆ. ಪೋಸ್ಟರ್ಗಳ ಫೋಟೋಗಳು ಹಾಗೂ ವೀಡಿಯೊಗಳು ವಿಎಚ್ಪಿ ಹಾಗೂ ಬಜರಂಗ ದಳದ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಹರಿದಾಡುತ್ತಿವೆ.
ಭೇಲ್ ಪುರ್ ಪೊಲೀಸರು ಈ ಸಂಬಂಧ ತನಿಖೆ ನಡೆಸುತ್ತಿದ್ದಾರೆ. ವೀಡಿಯೊಗಳು, ಫೋಟೋಗಳಲ್ಲಿ ಕೆಲವರನ್ನು ಗುರುತಿಸಲಾಗಿದೆ. ಹಿಂದೂಯೇತರರು ಘಾಟ್ಗಳ ಪಾವಿತ್ರ್ಯತೆಗೆ ಧಕ್ಕೆ ತರುತ್ತಿದ್ದಾರೆ ಹಾಗಾಗಿ ಈ ಎಚ್ಚರಿಕೆ ನೀಡಲಾಗಿದೆ ಎಂದು ಬಜರಂಗದಳ ಮುಖಂಡ ನಿಖಿಲ್ ತ್ರಿಪಾಠಿ ಅಭಿಪ್ರಾಯಪಟ್ಟಿದ್ದಾರೆ. ಇವರೆಲ್ಲ ಘಾಟ್ ಗಳಲ್ಲಿ ಮದ್ಯ, ಮಾಂಸ ಸೇವಿಸುತ್ತಾರೆ ಎಂಬ ಆರೋಪವಿದೆ. ಕೆಲವು ಯುವತಿಯರು ಘಾಟ್ಗಳಲ್ಲಿ ಬಿಯರ್ ಸೇವಿಸುತ್ತಿರುವ ಫೋಟೋಗಳು ಹರಿದಾಡಿದ್ದು, ಈ ರೀತಿ ಸಿಕ್ಕಿಬಿದ್ದರೆ ಪೊಲೀಸರಿಗೆ ಅವರನ್ನು ಒಪ್ಪಿಸುವುದಾಗಿ ಎಚ್ಚರಿಸಿದ್ದಾರೆ.