Connect with us


      
ಕರ್ನಾಟಕ

ಇಲಾಖೆಯ ಬಲವರ್ಧನೆಗೆ ಶ್ರಮಿಸಿ ಇಲ್ಲವೇ ಜಾಗಖಾಲಿ ಮಾಡಿ : ಸಚಿವ ಪ್ರಭು ಚವ್ಹಾಣ್

Kumara Raitha

Published

on

ಬೆಂಗಳೂರು: ಡಿಸೆಂಬರ್ 05 (ಯು.ಎನ್.ಐ.) ಇಲಾಖೆಯ ಬಲವರ್ಧನೆಗೆ ಶ್ರಮಿಸಿ ಇಲ್ಲವೇ ಜಾಗಖಾಲಿ ಮಾಡಿ ಎಂದು ಪಶುಸಂಗೋಪನೆ ಸಚಿವ ಪ್ರಭು ಚವ್ಹಾಣ್ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಬೆಂಗಳೂರಿನ ಹೆಬ್ಬಾಳದಲ್ಲಿ ನಡೆದ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಚಿವರು ಅಧಿಕಾರಿಗಳ ಕಾರ್ಯವೈಖರಿ ಬಗ್ಗೆ ಅಸಮಾಧಾನ ಹೋರಹಾಕಿದರು.

ಕೇಂದ್ರ ಸ್ಥಾನದಲ್ಲಿ ಅಧಿಕಾರಿಗಳು ಇರುವುದೇ ಇಲ್ಲ, ರೈತರ ಸಮಸ್ಯೆಗಳಿಗೆ ಸ್ಪಂದನೆ ನೀಡುತ್ತಿಲ್ಲ ಎಂಬ ಆರೋಪ ಸಾರ್ವಜನಿಕ ವಲಯದಿಂದ ಕೇಳಿ ಬರುತ್ತಿದೆ ಎಂದು ಸಚಿವರು ಅಧಿಕಾರಿಗಳನ್ನು ಪ್ರಶ್ನೆ ಮಾಡಿದರು. ಕೃಷಿಯೊಂದಿಗೆ ರೈತಾಪಿ ವರ್ಗ ಪಶುಸಂಗೋಪನೆಯನ್ನು ಅವಲಂಬಿಸಿದ್ದಾರೆ. ಸಕಾಲದಲ್ಲಿ ಜಾನುವಾರುಗಳ ಆರೋಗ್ಯ ನೋಡಿಕೊಳ್ಳಲು ಅವರೆಲ್ಲ ನಮ್ಮ ಇಲಾಖೆಯನ್ನು ಅವಲಂಬಿಸಿದ್ದಾರೆ. ಇಂತಹ ಸಮಯದಲ್ಲಿ ಕರ್ತವ್ಯಲೋಪವಾದರೆ ಪಶುಪಾಲಕರಿಗೆ ಆರ್ಥಿಕ ಸಂಕಷ್ಟ, ಜಾನುವಾರುಗಳು ಜೀವ ಕಳೆದುಕೊಳ್ಳುವಂತಹ ಪರಿಸ್ಥಿತಿ ಎದುರಾಗುತ್ತದೆ ಎಂದರು.

ಬೇರೆ ರಾಜ್ಯದ ಪಶುವೈದ್ಯರಷ್ಟು ಒತ್ತಡವಿಲ್ಲ:

ಉತ್ತರಪ್ರದೇಶದಲ್ಲಿ ೧೭ ಸಾವಿರ ಜಾನುವಾರುಗಳಿಗೆ ಒಬ್ಬ ಪಶುವೈದ್ಯರಿದ್ದಾರೆ ಆದರೆ ನಮ್ಮಲ್ಲಿ ಅಂದಾಜು ೪ ಸಾವಿರ ಜಾನುವಾರುಗಳಿಗೆ ಒಬ್ಬ ಪಶುವೈದ್ಯರಿದ್ದಾರೆ. ಇಂತಹ ಸಮಯದಲ್ಲಿ ನಿರ್ಹವಣೆ ಬೇರೆ ರಾಜ್ಯಕ್ಕೆ ಹೋಲಿಸಿದರೆ ನಮ್ಮಲ್ಲಿ ಹೆಚ್ಚು ಒತ್ತಡವಿಲ್ಲ. ಹೀಗಾಗಿ ಜಾನುವಾರುಗಳಿಗೆ ಹೆಚ್ಚು ಸಮರ್ಪಕವಾಗಿ ಚಿಕಿತ್ಸೆ ನೀಡಬಹುದಾಗಿದೆ. ನಿಮಗೆ ಬೇರೆ ರಾಜ್ಯದ ಪಶುವೈದ್ಯರಷ್ಟು ಒತ್ತಡವಿಲ್ಲ ಹೀಗಾಗಿ ಜವಾಬ್ದಾರಿಯಿಂದ ಸಮಯಪ್ರಜ್ಞೆಯಿಂದ ಕರ್ತವ್ಯ ನಿರ್ವಹಣೆ ಮಾಡಿ ಎಂದು ಕಿವಿಮಾತು ಹೇಳಿದರು.

ಗೋಶಾಲೆಗೆ ಸ್ಥಳ ಗುರುತಿಸಿ

ಜಿಲ್ಲೆಗೊಂದು ಗೋಶಾಲೆ ನಿರ್ಮಾಣಕ್ಕೆ ವಿಳಂಬ ಸಲ್ಲದು ಎಂದು ಸಚಿವರು ಅಧಿಕಾರಿಗಳಿಗೆ ಹೇಳಿದ್ದಾರೆ. ೨೧ ಜಿಲ್ಲೆಗಳಲ್ಲಿ ಸ್ಥಳ ಗುರುತಿಸಿ ಹಸ್ತಾಂತರ ಕಾರ್ಯ ಸಂಪೂರ್ಣವಾಗಿದ್ದು ಇನ್ನುಳಿದ ಜಿಲ್ಲೆಗಳಲ್ಲಿ ಕೆಲಸ ಆಮೆಗತಿಯಲ್ಲಿ ನಡೆಯುತ್ತಿರುವುದಕ್ಕೆ ಅಧಿಕಾರಿಗಳಿಂದ ಸಚಿವರು ಸ್ಪಷ್ಟನೆ ಕೇಳಿದರು.  ಜನವರಿ ೩೦ರ ವರೆಗೆ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಸ್ಥಳ ಗುರುತಿಸಿವ ಕಾರ್ಯ ಪೂರ್ಣಗೊಳ್ಳುವುದಲ್ಲದೆ ಹಸ್ತಾಂತರ ಕಾರ್ಯ ಸಹ ಮುಗಿಯಬೇಕು ಮತ್ತು ಗೋಶಾಲೆಗಳು ಆರಂಭ ಆಗಬೇಕು ಇಲ್ಲದಿದ್ದರೆ ಶಿಸ್ತುಕ್ರಮ ಕೈಗೊಳ್ಳುವುದಾಗಿ ಸಚಿವ ಪ್ರಭು ಚವ್ಹಾಣ್ ಪಶುಸಂಗೋಪನೆ ಇಲಾಖೆಯ ಉಪನಿರ್ದೇಶಕರಿಗೆ ಎಚ್ಚರಿಕೆ ನೀಡಿದ್ದಾರೆ.

ಕಾಲುಬಾಯಿ ರೋಗ ನಿಯಂತ್ರಣಕ್ಕೆ

ಕಾಲುಬಾಯಿ ರೋಗ ರಾಜ್ಯದಲ್ಲಿ ಪುನಃ ಮರುಕಳಿಸದಂತೆ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳಲು ಸಚಿವರು ಪಶುವೈದ್ಯರಿಗೆ ಸಲಹೆ ನೀಡಿದ್ದಾರೆ. ನಿಯಮಿತವಾಗಿ ಕಾಲುಬಾಯಿ ರೋಗ ಕಂಡುಬರುತ್ತಿರುವ ಜಿಲ್ಲೆ ಹಾಗೂ ತಾಲೂಕುಗಳಲ್ಲಿ ನಿಗಾವಹಿಸಿ ಮತ್ತು ಪಶುಚಿಕಿತ್ಸಾ ಶಿಬಿರಗಳನ್ನು ಪ್ರಾರಂಭಿಸಿ, ಯಾವುದೇ ರೋಗ ಲಕ್ಷಣ ಕಂಡುಬಂದಲ್ಲಿ ತಕ್ಷಣಕ್ಕೆ ಲಸಿಕೆ ನೀಡಲು ಕ್ರಮ ಕೈಗೊಳ್ಳಿ ಎಂದು ಸಚಿವರು ಸೂಚನೆ ನೀಡಿದಾರೆ.

ಗೋವುಗಳ ರಕ್ಷಣೆ

ಗೋಹತ್ಯೆ ನೀಷೆಧ ಜಾರಿಯಾದ ನಂತರದಲ್ಲಿ ರಾಜ್ಯದಲ್ಲಿ ೧೦ ಸಾವಿರಕ್ಕೂ ಹೆಚ್ಚು ಗೋವುಗಳ ರಕ್ಷಣೆ ಹಾಗೂ ೪೦೦ ಪ್ರಕರಣಗಳು ರಾಜ್ಯದ್ಯಂತ ದಾಖಲಾಗಿವೆ ಎಂದು ಅಧಿಕಾರಿಗಳು ಸಚಿವರಿಗೆ ಮಾಹಿತಿ ನೀಡಿದರು. ರಕ್ಷಣೆ ಆದ ಗೋವುಗಳನ್ನು ಅಲ್ಲಲ್ಲಿ ಲಭ್ಯವಿರುವ ಗೋಶಾಲೆಗಳಿಗೆ ಬೀಡಲಾಗಿದ್ದು ಪಶುವೈದ್ಯರು ನಿಯಮಿತವಾಗಿ ಗೋಶಾಲೆಗಳಿಗೆ ಭೇಟಿ ನೀಡಿ ಗೋವುಗಳ ಅರೋಗ್ಯ ತಪಾಸಣೆ ಮಾಡಿ ಎಂದು ಸಲಹೆ ನೀಡಿದ್ದಾರೆ.

ಚಿಕಿತ್ಸೆಗೆ ಪಶುಸಂಜೀವಿನಿ ಬಳಸಿಕೊಳ್ಳಿ

ರೈತರ ಜಾನುವಾರುಗಳ ಕಲ್ಯಾಣಕ್ಕಾಗಿ ಅನುಷ್ಠಾನಗೊಂಡಿರುವ ಪಶುಸಂಜೀವಿನಿ ತುರ್ತು ಚಿಕಿತ್ಸಾ ವಾಹನವನ್ನು ಹೆಚ್ಚು ಬಳಕೆ ಮಾಡಿಕೊಳ್ಳಿ. ಪಶುಕಲ್ಯಾಣ ಸಹಾಯವಾಣಿಗೆ ಬರುವ ಕರೆಗಳನ್ನ ಆಧರಿಸಿ ರೈತರ ಮನೆ ಬಾಗಿಲಿಗೆ ತೆರಳಿ ಚಿಕಿತ್ಸೆ ನೀಡಿ ಎಂದು ಸಚಿವರು ಪಶುವೈದ್ಯರಿಗೆ ಹೇಳಿದ್ದಾರೆ. ಇನ್ನು ಪ್ರತಿ ತಿಂಗಳು ಎಷ್ಟು ಚಿಕಿತ್ಸೆ ನೀಡಲಾಗುತ್ತಿದೆ, ಯಾವ ತರಹದ ಪ್ರಕರಣಗಳು ಹೆಚ್ಚು ಕಂಡುಬರುತ್ತಿವೆ ಎಲ್ಲವನ್ನು ಕಚೇರಿಗೆ ತಿಳಿಸಿ ಎಂದು ಸಚಿವರು ಹೇಳಿದ್ದಾರೆ.

ಬೆಂಗಳೂರು ನಗರ ಜಿಲ್ಲೆಯ ಅಧಿಕಾರಿಗಳ ಸಭೆ

ಇದೇ ಸಂದರ್ಭದಲ್ಲಿ ಪ್ರತ್ಯೇಕವಾಗಿ ಬೆಂಗಳೂರು ನಗರ ಜಿಲ್ಲೆಯ ಅಧಿಕಾರಿಗಳ ಸಭೆ ನಡೆಸಿದ ಸಚಿವರು ಬಿಡಾಡಿ ದನಗಳ ಸಮಸ್ಯೆ, ಹಾಗೂ ಪೆಟ್ ಶಾಪ್ ಗಳು ನೋಂದಣಿ ಮಾಡಿಕೊಳ್ಳುತ್ತಿರುವ ಕುರಿತು ಮಾಹಿತಿ ಕೇಳಿದರು. ನಗರ ಪ್ರದೇಶಗಳಲ್ಲಿ ಚಿಕಿತ್ಸಾ ವ್ಯವಸ್ಥೆ ಬಗ್ಗೆ ಶಿಘ್ರದಲ್ಲೇ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸುವುದಾಗಿ ಸಚಿವರು ಅಧಿಕಾರಿಗಳಿಗೆ ಸೂಚನೆ ನೀಡಿದರು. ಔಷಧ ದಾಸ್ತಾನು ಸಮರ್ಪಕವಾಗಿರಿಸಿ ಹಣ ಪಡೆಯದೇ, ಚೀಟಿ ಬರೆಯದೆ ಉಚಿತವಾಗಿ ನೀಡಿ ಎಂದು ಸಚಿವರು ಅಧಿಕಾರಿಗಳಿಗೆ ಹೇಳಿದರು.

ಇಂದು ನಡೆದ ಸಭೆಯಲ್ಲಿ ಪಶುಸಂಗೋಪನೆ ಇಲಾಖೆಯ ಹಿರಿಯ ಅಧಿಕಾರಿಗಳು ಸೇರಿದಂತೆ ಆಯುಕ್ತರಾದ ಬಸವರಾಜೇಂದ್ರ, ನಿರ್ದೇಶಕ ಮಂಜುನಾಥ ಪಾಳೇಗಾರ ಸೇರಿದಂತೆ ಇಲಾಖೆಯ ಸಿಬ್ಬಂದಿ ಹಾಜರಿದ್ದರು.

Share