Connect with us


      
ಕ್ರೀಡೆ

“ನಾನು ಏನನ್ನೂ ಸಾಬೀತುಪಡಿಸುವ ಅಗತ್ಯವಿಲ್ಲ” ವಿರಾಟ್ ಕೊಹ್ಲಿ

Iranna Anchatageri

Published

on

ಕೇಪ್ ಟೌನ್ : ಜನೆವರಿ 10 (ಯು.ಎನ್.ಐ.) ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮೊದಲ ಬಾರಿಗೆ ಮಾಧ್ಯಮಗಳ ಮುಂದೆ ಪ್ರತ್ಯಕ್ಷರಾದರು. ಪ್ರಸ್ತುತ ಟೆಸ್ಟ್ ಸರಣಿ ಹಾಗೂ ತಮ್ಮ ಬ್ಯಾಟಿಂಗ್ ಫಾರ್ಮ್ ಬಗ್ಗೆ ಮುಕ್ತವಾಗಿ ಸುದ್ದಿಗಾರರೊಂದಿಗೆ ಮಾಹಿತಿ ಹಂಚಿಕೊಂಡರು.ಫಿಟ್ನೆಸ್ ವಿಚಾರದಲ್ಲಿ ವಿರಾಟ್ ಶುಭ ಸುದ್ದಿ ನೀಡಿದ್ದು, ಮೂರನೇ ಪಂದ್ಯದಲ್ಲಿ ಆಡುವುದಾಗಿ ಹೇಳಿದ್ದಾರೆ. ಆದರೆ, ನಾಯಕತ್ವ ವಿವಾದದ ಬಗ್ಗೆ ಕೊಹ್ಲಿ ಯಾವುದೇ ಹೇಳಿಕೆ ನೀಡಲಿಲ್ಲ.

“ನನ್ನ ಬ್ಯಾಟಿಂಗ್ ಬಗ್ಗೆ ಪ್ರಶ್ನೆಗಳು ಏಳುತ್ತಿರುವುದು ಇದೇನು ಮೊದಲಲ್ಲ. 2014ರ ಇಂಗ್ಲೆಂಡ್ ಪ್ರವಾಸದ ವೇಳೆಯೂ ಇದು ನಡೆದಿತ್ತು. ಹೊರಗಿನವರು ಏನು ಹೇಳುತ್ತಾರೆ ಅನ್ನೋದು ನನಗೆ ಮುಖ್ಯವಲ್ಲ. ನಾನು ಯಾರಿಗೂ ಏನನ್ನೂ ಸಾಬೀತುಪಡಿಸುವ ಅಗತ್ಯವಿಲ್ಲ” ಎಂದು ಹೇಳಿದ್ದಾರೆ. ಎರಡನೇ ಟೆಸ್ಟ್ ಪಂದ್ಯದ ವೇಳೆ ವೇಗದ ಬೌಲರ್ ಮೊಹಮ್ಮದ್ ಸಿರಾಜ್ ಅವರು ಗಾಯಗೊಂಡಿದ್ದಾರೆ. ಮುಂದಿನ ಟೆಸ್ಟ್‌ನಲ್ಲಿ ಸಿರಾಜ್ ಬದಲಿಗೆ ಯಾರು ಎಂಬ ಪ್ರಶ್ನೆ ಬಗ್ಗೆ ವಿರಾಟ್ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ಈ ಬಗ್ಗೆ ಕೋಚ್ ಅವರೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದಷ್ಟೇ ತಿಳಿಸಿದರು.

ಹೆಚ್ಚು ಕ್ರಿಕೆಟ್ ಆಡಿರುವುದು ಗಾಯಕ್ಕೆ ಕಾರಣ

ಭಾರತೀಯ ಆಟಗಾರರ ಫಿಟ್ನೆಸ್ ಬಗ್ಗೆಯೂ ವಿರಾಟ್ ಅವರನ್ನು ಸುದ್ದಿಗಾರರು ಪ್ರಶ್ನೆ ಮಾಡಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ವಿರಾಟ್ ಕೊಹ್ಲಿ, “ನಾವು ತುಂಬಾ ಕ್ರಿಕೆಟ್ ಆಡುತ್ತಿದ್ದೇವೆ. ಎಲ್ಲಾ ಅಂತಾರಾಷ್ಟ್ರೀಯ ಪಂದ್ಯಗಳಿಗೆ ಅತ್ಯುತ್ತಮ ತಂಡವನ್ನು ಕಣಕ್ಕಿಳಿಸಲು ಬಯಸುತ್ತೇವೆ. ಆದರೆ ಆಟಗಾರರು ಗಾಯಗೊಳ್ಳುವುದು ಸಾಮಾನ್ಯ ಎಂದರು.

ಜಡೇಜಾ ಅನುಪಸ್ಥಿತಿಯಲ್ಲಿ ಅಶ್ವಿನ್ ಉತ್ತಮ ಪ್ರದರ್ಶನ

ರವೀಂದ್ರ ಜಡೇಜಾ ಅವರು ಟೆಸ್ಟ್ ಸರಣಿಯ ಆರಂಭಕ್ಕೂ ಮುನ್ನ ಗಾಯದ ಕಾರಣ ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಬರಲು ಸಾಧ್ಯವಾಗಲಿಲ್ಲ. ಜಡೇಜಾ ಗಾಯಗೊಂಡಿರುವುದು ದುರದೃಷ್ಟಕರ. ಆದರೆ, ಇದುವರೆಗಿನ ಈ ಸರಣಿಯಲ್ಲಿ ಆರ್ ಅಶ್ವಿನ್ ಉತ್ತಮ ಪ್ರದರ್ಶನ ನೀಡಿದ್ದಾರೆ. ಸ್ಪಿನ್ ಬೌಲಿಂಗ್ ಆಲ್ ರೌಂಡರ್ ಆಗಿ ವಿಶ್ವದ ಎಲ್ಲಿ ಬೇಕಾದರೂ ಆಡಬಹುದು ಎಂಬುದನ್ನು ಅಶ್ವಿನ್ ಹಲವು ವರ್ಷಗಳಿಂದ ಸಾಬೀತುಪಡಿಸಿದ್ದಾರೆ ಎಂದರು.

ರಾಹುಲ್ ಅವರಿಂದ ಉತ್ತಮ ನಾಯಕತ್ವ

ಎರಡನೇ ಟೆಸ್ಟ್ ಪಂದ್ಯದಲ್ಲಿ ನಾಯಕನಾಗಿ ಕೆಎಲ್ ರಾಹುಲ್ ಉತ್ತಮ ಪ್ರದರ್ಶನ ನೀಡಿದ್ದಾರೆ ಎಂದು ವಿರಾಟ್ ಬೆನ್ನುತಟ್ಟಿದರು. ರಾಹುಲ್ ಅತ್ಯಂತ ಸಮತೋಲಿತ ನಾಯಕತ್ವದೊಂದಿಗೆ ವಿಕೆಟ್ ಪಡೆಯಲು ಪ್ರಯತ್ನ ಮಾಡಿದರು. ಆದರೆ ದಕ್ಷಿಣ ಆಫ್ರಿಕಾ ತಂಡ ಉತ್ತಮ ಆಟ ಆಡಿದೆ ಎಂದರು. ಇನ್ನು ನಾಳೆ ಮೂರನೇ ಟೆಸ್ಟ್ ಪಂದ್ಯ ದಕ್ಷಿಣ ಆಫ್ರಿಕಾ ವಿರುದ್ಧ ಕೇಪ್ ಟೌನ್ ನ ನ್ಯೂಲ್ಯಾಂಡ್ಸ್ ನಲ್ಲಿ ನಡೆಯಲಿದೆ. ಇದಕ್ಕಾಗಿ ಭಾರತೀಯ ತಂಡದ ಆಟಗಾರರು ಅಭ್ಯಾಸದಲ್ಲಿ ನಿರತರಾಗಿದ್ದರು.

Share