Connect with us


      




ಕರ್ನಾಟಕ

ವಿಧಾನಪರಿಷತ್ ಚುನಾವಣೆಗೆ ಮತದಾನದ ಹಕ್ಕು ತಿರಸ್ಕರಿಸಬೇಕು: ಡಿ.ಕೆ. ಶಿವಕುಮಾರ್

Bindushree Hosuru

Published

on

ಬೆಂಗಳೂರು: ಡಿ. 09 (ಯು.ಎನ್.ಐ) ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್ತಿಗೆ ನಡೆಯುತ್ತಿರುವ ಚುನಾವಣೆಗೆ ರಾಜ್ಯದ ಎಲ್ಲ ಸ್ಥಳೀಯ ಸಂಸ್ಥೆಗಳ ನಾಮನಿರ್ದೇಶಿತ ಸದಸ್ಯರ ಮತದಾನದ ಹಕ್ಕು ತಿರಸ್ಕರಿಸಬೇಕು ಎಂದು ರಾಜ್ಯ ಚುನಾವಣಾ ಆಯೋಗದ ಮೂಲಕ ಕೇಂದ್ರ ಚುನಾವಣಾ ಆಯೋಗಕ್ಕೆ ಪತ್ರ ಬರೆದು ಮನವಿ ಮಾಡಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್​ ಹೇಳಿದ್ದಾರೆ.

ಬೆಂಗಳೂರು ನಗರ ಸ್ಥಳೀಯ ಸಂಸ್ಥೆಗಳ ನಾಮನಿರ್ದೇಶನ ಸದಸ್ಯರಿಗೆ ಮತದಾನದ ಹಕ್ಕು ನೀಡಬಾರದು. ಸಂವಿಧಾನದ 243 (ಆರ್) ನೇ ಪರಿಚ್ಛೇದದ ಅನ್ವಯ ನಾಮನಿರ್ದೇಶಿತ ಸದಸ್ಯರು ಕಲಾಪದಲ್ಲಿ ಪಾಲ್ಗೊಂಡು, ಸಲಹೆಗಳನ್ನು ನೀಡಬಹುದೇ ಹೊರತು ಮತದಾನ ಮಾಡಲು ಅವಕಾಶವಿಲ್ಲ ಎಂಬ ನಿಯಮವಿದೆ. ಈ ಬಗ್ಗೆ ನಮ್ಮ ಪಕ್ಷದವರೇ ಆದ ಮಾಜಿ ಮೇಯರ್ ಪಿ.ಆರ್. ರಮೇಶ್ ಅವರು ನ್ಯಾಯಾಲಯದ ಮೊರೆ ಹೋಗಿದ್ದರು.

ಗುರುವಾರ ಮಧ್ಯಾಹ್ನ ಮಧ್ಯಂತರ ಆದೇಶ ಹೊರಡಿಸಿರುವ ನ್ಯಾಯಾಲಯವು, ನಾಮನಿರ್ದೇಶನ ಸದಸ್ಯರ ಮತಗಳನ್ನು ಮುಚ್ಚಿದ ಲಕೋಟೆಯಲ್ಲಿ, ಪ್ರತ್ಯೇಕ ಮತಪೆಟ್ಟಿಗೆಯಲ್ಲಿ ಇಡಬೇಕು. ತಾನು ಮುಂದಿನ ಆದೇಶ ನೀಡುವವರೆಗೂ ಅವುಗಳನ್ನು ತೆರೆಯಬಾರದು, ಮತಗಳ ಎಣಿಕೆಗೂ ಪರಿಗಣಿಸಬಾರದು ಎಂದು ಸೂಚಿಸಿ, ಸರಕಾರ ಮತ್ತು ಚುನಾವಣೆ ಆಯೋಗಕ್ಕೂ ನೋಟಿಸ್ ಜಾರಿ ಮಾಡಿದೆ.

ನ್ಯಾಯಾಲಯದ ಈ ಆದೇಶವನ್ನು ರಾಜ್ಯದ ಎಲ್ಲ 219 ಸ್ಥಳೀಯ ಸಂಸ್ಥೆಗಳಿಗೂ ಅನ್ವಯ ಮಾಡಬೇಕು. ಇಲ್ಲಿ ತಲಾ ಐವರು ನಾಮನಿರ್ದೇಶಿತ ಸದಸ್ಯರು ಇದ್ದಾರೆ. ಅವರೆಲ್ಲರ ಮತದಾನದ ಹಕ್ಕು ರದ್ದಪಡಿಸಬೇಕು ಎಂದು ರಾಜ್ಯ ಸರಕಾರವನ್ನು ಆಗ್ರಹಿಸುತ್ತಿದ್ದೇವೆ. ಕೇಂದ್ರ ಚುನಾವಣೆ ಆಯೋಗಕ್ಕೂ ಕಾಂಗ್ರೆಸ್ ಪಕ್ಷದಿಂದ ಮನವಿ ಮಾಡುತ್ತಿದ್ದೇವೆ.

ಈಗ ನ್ಯಾಯಾಲಯ ಮಧ್ಯಂತರ ಆದೇಶವನ್ನಷ್ಟೇ ನೀಡಿದೆ. ನಾಳೆ ನಾಮನಿರ್ದೇಶಿತ ಸದಸ್ಯರ ಮತಗಳನ್ನು ಪುರಸ್ಕರಿಸಬಹುದು ಇಲ್ಲವೇ ತಿರಸ್ಕರಿಸಬಹುದು. ಹೀಗಾಗಿ ಮತದಾನದ ಹಕ್ಕು ರದ್ದುಪಡಿಸುವಂತೆ ಕೇಳುವುದು ಎಷ್ಟು ಸರಿ ಎಂಬ ಪ್ರಶ್ನೆಗೆ ಉತ್ತರಿಸಿದ ಶಿವಕುಮಾರ್ ಅವರು, ಕೋರ್ಟ್ ನಮ್ಮ ಮನವಿಯನ್ನು ಪರಿಗಣಿಸುತ್ತದೆ ಎಂಬ ವಿಶ್ವಾಸವಿದೆ. ಅಂತಿಮವಾಗಿ ಕೋರ್ಟ್ ಆದೇಶಕ್ಕೆ ನಾವು ಬದ್ಧ ಎಂದರು.

ಹಿಂದೆ ನಮ್ಮ ಅವಧಿಯಲ್ಲೂ ಮತದಾನ ಆಗಿರಬಹುದು. ಆದರೆ ಸಂವಿಧಾನದ ಆಶಯ ಎಲ್ಲೋ ಒಂದು ಕಡೆ ನ್ಯಾಯಾಲಯದಲ್ಲಿ ಇತ್ಯರ್ಥ ಆಗಲೇಬೇಕಲ್ಲವೇ? ನಮಗೆ ಮನದಟ್ಟಾದ ವಿಷಯವನ್ನು ಕೋರ್ಟ್ ಗಮನಕ್ಕೆ ತಂದಿದ್ದೇವೆ. ನಮ್ಮ ವಕೀಲರು ನ್ಯಾಯಾಲಯಕ್ಕೂ ಮನವರಿಕೆ ಮಾಡಿಕೊಟ್ಟಿದ್ದಾರೆ.

ವಿಜಯಪುರದಲ್ಲಿ ಪಿಡಿಒಗಳನ್ನು ಬಿಜೆಪಿ ಚುನಾವಣೆ ಕೆಲಸಕ್ಕೆ ದುರ್ಬಳಕೆ ಮಾಡಿಕೊಂಡಿರುವ ಬಗ್ಗೆ ದೂರುಗಳ ಬಗ್ಗೆ ಪ್ರತಿಕ್ರಿಯೆ ವ್ಯಕ್ತಪಡಿಸಿದ ಅವರು, ಇಡೀ ಸರಕಾರದ ಆಡಳಿತ ಯಂತ್ರವೇ ದುರುಪಯೋಗ ಆಗುತ್ತಿದೆ ಎಂದು ಸುದ್ದಿ ಗೋಷ್ಟಿಯಲ್ಲಿ ಹೇಳಿದರು.

Share