Connect with us


      
ರಾಜಕೀಯ

ಕಾಂಗ್ರೆಸ್ ದೌರ್ಬಲ್ಯದ ಮೇಲೆ ನಾವು ರಾಜಕೀಯ ಮಾಡುವುದಿಲ್ಲ: ಹೆಚ್.ಡಿ.ಕುಮಾರಸ್ವಾಮಿ

Lakshmi Vijaya

Published

on

ಬೆಂಗಳೂರು: ಆಗಸ್ಟ್ 03 (ಯು.ಎನ್.ಐ.) ಕಾಂಗ್ರೆಸ್ ದೌರ್ಬಲ್ಯದ ಮೇಲೆ ನಾವು ರಾಜಕೀಯ ಮಾಡುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಮಾರ್ಮಿಕವಾಗಿ ಹೇಳಿದ್ದಾರೆ. ಸಿದ್ದರಾಮೋತ್ಸವದಿಂದ ಕಾಂಗ್ರೆಸ್ ಪಕ್ಷದಲ್ಲಿ  ಭಿನ್ನಮತ ಇನ್ನೂ ಹೆಚ್ಚಾಗುತ್ತದೆ ಎಂಬ ಬಗ್ಗೆ ನಾನು ಮಾತನಾಡುವುದಿಲ್ಲ ಎಂದರು.

ಮುಂಬರುವ ಬಿಬಿಎಂಪಿ ಚುನಾವಣೆ ಹಿನ್ನೆಲೆಯಲ್ಲಿ ಇಂದು ಪಕ್ಷದ ಕಚೇರಿ ಜೆಪಿ ಭವನದಲ್ಲಿ ಕರೆದಿದ್ದ ಪಕ್ಷದ ಮುಖಂಡರು, ಪದಾಧಿಕಾರಿಗಳ ಸಭೆಗೂ ಮುನ್ನ ಸುದ್ದಿಗಾರರ ಜೊತೆ ಮಾತನಾಡಿದರು ಅವರು, ಸಿದ್ದರಾಮೋತ್ಸವಕ್ಕೆ ಬರುವಾಗ ಅವರ ಕ್ಷೇತ್ರದ ಕಾರ್ಯಕರ್ತರೊಬ್ಬರು  ಮೃತಪಟ್ಟಿದ್ದಾರೆ. ಆ ಕಾರ್ಯಕ್ರಮದಲ್ಲಿ ಆ ಕಾರ್ಯಕರ್ತನಿಗಾಗಿ ಒಂದು ಶ್ರದ್ಧಾಂಜಲಿ ಕೂಡ ಸಲ್ಲಿಕೆ‌‌ ಮಾಡಿಲ್ಲ. ಇದು ಅವರ ಕಾರ್ಯಕರ್ತರನ್ನು ಉಳಿಸಿಕೊಳ್ಳುವ ರೀತಿ. ಕಾರ್ಯಕರ್ತ ಸತ್ತರೂ ಯಾರೂ ಕೇಳಲಿಲ್ಲ. ಕಾರ್ಯಕರ್ತನಿಗೆ ಬೆಲೆ ಕೊಡದೇ ಸಿದ್ದರಾಮಯ್ಯ ಅವರು ವೀರಾವೇಶದಲ್ಲಿ ಮಾತನಾಡುತ್ತಿದ್ದಾರೆ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.

ಸಿದ್ದರಾಮೋತ್ಸವದ ಬಗ್ಗೆ ನನಗೆ ಆಸಕ್ತಿ ಇಲ್ಲ. ಜೆಡಿಎಸ್ ನಿಂದ ಜನತಾ ಜಲಧಾರೆ ಮಾಡಿದ್ದೆವು. ಅದರ ಶೇ.50ರಷ್ಟು ಈ  ಸಮಾವೇಶ ಇಲ್ಲ. ನಮ್ಮ ಕಾರ್ಯಕ್ರಮದ ಮುಂದೆ ಸಿದ್ದರಾಮೋತ್ಸವ ಕಾರ್ಯಕ್ರಮ ಏನೂ ಅಲ್ಲ. 7 ಲಕ್ಷ, 8 ಲಕ್ಷ, 20 ಲಕ್ಷ ಅಂತಾರೆ. ಅವರ ಲೆಕ್ಕಕ್ಕೆ ಅರ್ಥವೇ ಇಲ್ಲ. ನಮಗೂ ಎಲ್ಲಾ ಮಾಹಿತಿ ಇದೆ. ಅಡುಗೆ ಮಾಡಿರುವುದು, ಶಾಮಿಯಾನ ಹಾಕಿರುವುದು ಎಲ್ಲದರ ಮಾಹಿತಿ ನನಗೆ ಇದೆ. ಎಷ್ಟೇ ಆರ್ಭಟ ಮಾಡಿದರೂ ನಮ್ಮ ಕಾರ್ಯಕ್ರಮಕ್ಕೆ ಅವರ ಕಾರ್ಯಕ್ರಮ ಸರಿಸಾಟಿ ಆಗುವುದಿಲ್ಲ ಎಂದು ಹೇಳಿದರು.

ಸಿದ್ದರಾಮೋತ್ಸವದಲ್ಲಿ ಸಿದ್ದರಾಮಯ್ಯ ಸಿಎಂ ಕೂಗು ವಿಚಾರಕ್ಕೆ ಪ್ರತಿಕ್ರಿಯಿಸಿದ ಹೆಚ್ ಡಿಕೆ, ಎಲ್ಲರಿಗೂ ಮುಖ್ಯಮಂತ್ರಿಯಾಗಬೇಕೆಂದು ಆಸೆ ಇರುತ್ತದೆ. ಇದೇ ಸಿದ್ದರಾಮಯ್ಯ ಹಿಂದೆ ಕುಮಾರಸ್ವಾಮಿ, ಯಡಿಯೂರಪ್ಪ ಅವರ ಅಪ್ಪನ ಆಣೆ ಸಿಎಂ ಆಗುವುದಿಲ್ಲವೆಂದು ಹೇಳಿದ್ದರು. ಆದರೆ ನಾವಿಬ್ಬರೂ ಮುಖ್ಯಮಂತ್ರಿಗಳಾದೆವು. ಅವರ ಆಸೆ  ಈಡೇರಬೇಕಾದರೆ 113 ಸೀಟು ಬೇಕು. ಇದನ್ನು ಜನರು ತೀರ್ಮಾನ ಮಾಡುತ್ತಾರೆ ಎಂದು ತಿರುಗೇಟು ನೀಡಿದರು.

ಮುಖ್ಯಮಂತ್ರಿ ಆಗುತ್ತೇನೆಂದು ಆಶಾ ಗೋಪುರ ಕಟ್ಟುತ್ತಿದ್ದಾರೆ ಕಟ್ಟಲಿ. ನಾಡಿನ ಜನರು ಅಂತಿಮವಾಗಿ ತೀರ್ಪು ಕೊಡುತ್ತಾರೆ.  ಜನ ಏನು ತೀರ್ಪು ಕೊಡುತ್ತಾರೆ ನೋಡೋಣ ಎಂದರು.

ಅಧಿವೇಶನ ಕರೆಯಲು ಆಗ್ರಹ:

ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿ ಕುಮಾರಸ್ವಾಮಿ ಅವರು, ಕಾಂಗ್ರೆಸ್ ನವರು ಏನು ಬೇಕಾದರೂ ಮಾಡಿಕೊಳ್ಳಲಿ. ಮೊದಲು ರಾಜ್ಯ ಸರ್ಕಾರ ಅಧಿವೇಶನ ಕರೆಯಬೇಕು. ರಾಜ್ಯದಲ್ಲಿ‌ ಮಳೆ ಬಂದು ದೊಡ್ಡ ಅನಾಹುತ ಆಗಿದೆ. ಅನೇಕ ಸಮಸ್ಯೆಗಳು ಆಗಿವೆ. ಈ ಬಗ್ಗೆ ಚರ್ಚೆ ಆಗಬೇಕು. ಕೂಡಲೇ‌ ಸರ್ಕಾರ ಅಧಿವೇಶನ ಕರೆಯಬೇಕು ಎಂದು ಆಗ್ರಹಿಸಿದರು.

Share