Connect with us


      




ದೇಶ

ಅಖಿಲೇಶ್ ಯಾದವ್ ಪ್ರತಿಷ್ಠಿತ ಚುನಾವಣಾ ಕಣ ಕರ್ಹಾಲ್ ಕ್ಷೇತ್ರದ ಬಗ್ಗೆ ನಿಮಗೆಷ್ಟು ತಿಳಿದಿದೆ?

Vanitha Jain

Published

on

ಕರ್ಹಾಲ್: ಮಾರ್ಚ್ 10 (ಯು.ಎನ್.ಐ.) ಪಂಚರಾಜ್ಯಗಳಳಾದ ಉತ್ತರಪ್ರದೇಶ, ಪಂಜಾಬ್, ಗೋವಾ, ಉತ್ತರಖಂಡ್ , ಮಣಪುರ ರಾಜ್ಯಗಳ ಚುನಾವಣಾ ಅಭ್ಯರ್ಥಿಗಳ ಭವಿಷ್ಯ ಇಂದು ನಿರ್ಧಾರವಾಗಲಿದೆ. ಬಿಜೆಪಿ, ಕಾಂಗ್ರೆಸ್ ಆಮ್ ಆದ್ಮಿ ಪಕ್ಷ, ಬಿಎಸ್ ಪಿ, ಎಸ್ ಪಿ ಎಲ್ಲಾ ಪಕ್ಷಗಳು ಪ್ರಚಾರವನ್ನು ಬಿರುಸಾಗಿಯೇ ನಡೆಸಿವೆ. ನಿರುದ್ಯೋಗ ನಿವಾರಣೆ, ಮಹಿಳೆಯರ ಅಭಿವೃದ್ಧಿ, ರಾಜ್ಯದ ಅಭಿವೃದ್ಧಿ, ಉಚಿತ ಗ್ಯಾಸ್, ವಿದ್ಯುತ್ ಹೀಗೆ ಸಾಲು ಸಾಲು ಭರವಸೆಗಳ ಮಹಾಪೂರವನ್ನೇ ಪ್ರಚಾರದ ವೇಳೆ ಹರಿಸಿವೆ ಪಕ್ಷಗಳು. ಆದರೆ ಇಂದು ಎಲ್ಲಾ ಪಕ್ಷದ ಅಭ್ಯರ್ಥಿಗಳ ಹಣೆಬರಹ ನಿರ್ಧಾರವಾಗಲಿದೆ. ಈಗಾಗಲೇ ಮತ ಎಣಿಕೆ ಪ್ರಾರಂಭವಾಗಿದೆ.

ಚುನಾವಣಾ ಆಯೋಗದ ವೆಬ್‌ಸೈಟ್‌ನಲ್ಲಿ ಲಭ್ಯವಿರುವ ಇತ್ತೀಚಿನ ಪಕ್ಷವಾರು ಟ್ರೆಂಡ್ ಗಳ ಪ್ರಕಾರ, ಬಿಜೆಪಿ 232 ಸ್ಥಾನಗಳಲ್ಲಿ ಮುಂದಿದ್ದರೆ, ಎಸ್‌ಪಿ 99 ರಲ್ಲಿ ಮುನ್ನಡೆ ಸಾಧಿಸಿದೆ. ಪ್ರಸ್ತುತ ಕಾಂಗ್ರೆಸ್ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ ಮತ್ತು ಬಿಎಸ್ ಪಿ ಆರು ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಅವರ ಬಿಜೆಪಿ ಸರ್ಕಾರಕ್ಕೆ ಸ್ಪಷ್ಟ ಬಹುಮತ ದೊರೆಯಲಿದೆ ಎಂದು ಹಲವು ಎಕ್ಸಿಟ್ ಪೋಲ್‌ಗಳು ಭವಿಷ್ಯ ನುಡಿದಿರುವುದು ಗಮನಾರ್ಹವಾಗಿದೆ.

ಆದರೆ ಕರ್ಹಾಲ್ ವಿಧಾನಸಭಾ ಕ್ಷೇತ್ರದಿಂದ ಪ್ರಥಮ ಬಾರಿಗೆ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿರುವ ಸಮಾಜವಾದಿ ಪಕ್ಷದ ಮುಖಂಡ ಅಖಿಲೇಶ್ ಯಾದವ್ ಮುನ್ನಡೆ ಕಾಯ್ದುಕೊಂಡಿದ್ದಾರೆ. ಕರ್ಹಾಲ್ ಕ್ಷೇತ್ರದಲ್ಲಿ ಎಸ್‌ಪಿ ಮುಖ್ಯಸ್ಥ ಅಖಿಲೇಶ್ ಯಾದವ್ 13,877 ಮತಗಳಿಂದ ಮುನ್ನಡೆ ಸಾಧಿಸಿದ್ದಾರೆ.

ಕರ್ಹಾಲ್ ಕ್ಷೇತ್ರದ ರಾಜಕೀಯ ವಿವರ
ಉತ್ತರ ಪ್ರದೇಶದ 75 ಜಿಲ್ಲೆಗಳ ಎಲ್ಲಾ 403 ಸ್ಥಾನಗಳಿಗೆ ಚುನಾವಣೆ ನಡೆದಿದೆ. ಇದರಲ್ಲಿ ಇದೀಗ ಪ್ರತಿಷ್ಟಿತ ಕ್ಷೇತ್ರವಾಗಿ ಮಾರ್ಪಟ್ಟಿರುವ ಕರ್ಹಾಲ್ 110ನೇ ಕ್ಷೇತ್ರವಾಗಿದೆ. ಇದು ಉತ್ತರ ಪ್ರದೇಶದ ದೋಬ್ ಪ್ರದೇಶ ಮತ್ತು ಮನ್‌ಪುರಿ ಜಿಲ್ಲೆಯಲ್ಲಿರುವ ಅಸೆಂಬ್ಲಿ/ವಿಧಾನಸಭಾ ಸ್ಥಾನವಾಗಿದೆ. ಕರ್ಹಾಲ್ ಮನ್ಪುರಿ ಲೋಕಸಭೆ/ಸಂಸದೀಯ ಕ್ಷೇತ್ರದ ಭಾಗವಾಗಿದೆ.

ಕರ್ಹಾಲ್ ಕ್ಷೇತ್ರದ ಪ್ರಮುಖ ಅಭ್ಯರ್ಥಿಗಳು ಯಾರು ಯಾರು?
ಸಮಾಜವಾದಿ ಪಕ್ಷ ಮೊದಲ ಸ್ಥಾನದಲ್ಲಿದ್ದರೆ, ಬಿಎಸ್ ಪಿ ಮತ್ತು ಬಿಜೆಪಿ ಕ್ರಮವಾಗಿ ಎರಡನೇ, ಮೂರನೇ ಸ್ಥಾನದಲ್ಲಿವೆ. ಉತ್ತರ ಪ್ರದೇಶದ ಸಣ್ಣ ಪಟ್ಟಣವಾದ ಕರ್ಹಾಲ್ ನಿಂದ ಮೂವರು ರಾಜಕೀಯ ಪ್ರಮುಖರು ಸ್ಪರ್ಧಿಸುತ್ತಿದ್ದಾರೆ. ಇದರಲ್ಲಿ ಎಸ್ಪಿಯ ಅಖಿಲೇಶ್ ಯಾದವ್, ಬಿಎಸ್ಪಿಯ ಕುಲದೀಪ್ ನಾರಾಯಣ್ ಮತ್ತು ಎಸ್ಪಿ ಸಿಂಗ್ ಬಘೇಲ್ ಸೇರಿದ್ದಾರೆ.

ಕರ್ಹಾಲ್ ಅನ್ನು ಯಾದವರ ಭದ್ರಕೋಟೆ” ಎಂದು ಏಕೆ ಕರೆಯುತ್ತಾರೆ?
ಕರ್ಹಾಲ್ ಅನ್ನು ‘ಯಾದವರ ಭದ್ರಕೋಟೆ’ ಎಂದು ಪರಿಗಣಿಸಲಾಗಿದೆ. ಚುನಾವಣಾ ಆಯೋಗದ ಪ್ರಕಾರ, ಕರ್ಹಾಲ್ ಕ್ಷೇತ್ರವು ಒಟ್ಟು 3.71 ಲಕ್ಷ ಮತದಾರರನ್ನು ಹೊಂದಿದೆ, ಇದರಲ್ಲಿ 1.25 ಲಕ್ಷ ಯಾದವರು ಮತ್ತು 18,000 ಮುಸ್ಲಿಮರು ಇದ್ದಾರೆ. 1951ರಲ್ಲಿ, ಕ್ಷೇತ್ರವನ್ನು ಕರ್ಹಾಲ್ ಪಶ್ಚಿಮ ಮತ್ತು ಶಿಕೋಹಾಬಾದ್ ಪೂರ್ವ ಮತ್ತು ಕರ್ಹಾಲ್ ಪೂರ್ವ ಮತ್ತು ಭೋಂಗಾವ್ ದಕ್ಷಿಣ ಎಂದು ವಿಂಗಡಿಸಲಾಯಿತು. ಬಹುಸಂಖ್ಯಾತ ದಲಿತ ಸಮುದಾಯದ ಕಾರಣದಿಂದ 1957 ಮತ್ತು 1969 ರ ನಡುವೆ ಮೀಸಲು ಕ್ಷೇತ್ರವಾಗಿತ್ತು.

ಕರ್ಹಾಲ್ ನಲ್ಲಿ ಎಸ್ ಪಿಗೆ ಹ್ಯಾಟ್ರಿಕ್ ಜಯ ಸಿಗುತ್ತಾ?
ಕರ್ಹಾಲ್ ಎಸ್ ಪಿ ಪಕ್ಷದ ನಾಭಿ ಎಂದೇ ಹೇಳಬಹುದು. 2017 ಮತ್ತು 2012ರ ವಿಧಾನಸಭಾ ಚುನಾವಣೆಯಲ್ಲಿ ಎಸ್‌ಪಿ ಅಭ್ಯರ್ಥಿಗಳು ಈ ಸ್ಥಾನಗಳನ್ನು ಗೆದ್ದಿದ್ದರು. 2017ರ ಉತ್ತರ ಪ್ರದೇಶ ಅಸೆಂಬ್ಲಿ ಚುನಾವಣೆಯಲ್ಲಿ, ಎಸ್ ಪಿಯ ಸೊಬರನ್ ಸಿಂಗ್ ಯಾದವ್ ಈ ಕ್ಷೇತ್ರದಲ್ಲಿ ಬಿಜೆಪಿಯ ರಾಮ ಶಾಕ್ಯ ಅವರನ್ನು 38,405 ಮತಗಳ ಅಂತರದಿಂದ ಸೋಲಿಸಿದರು, ಇದು ಕ್ಷೇತ್ರದಲ್ಲಿ ಒಟ್ಟು ಪಡೆದ ಒಟ್ಟು ಮತಗಳ 18.26%. 2017ರಲ್ಲಿ ಎಸ್‌ಪಿ 49.57% ಮತಗಳನ್ನು ಪಡೆದಿತ್ತು. 2012 ರಲ್ಲಿ, ಎಸ್‌ಪಿಯ ಸೊಬರನ್ ಸಿಂಗ್ ಯಾದವ್ ಈ ಕ್ಷೇತ್ರದಲ್ಲಿ ಬಿಎಸ್ ಪಿಯ ಜೈವಿರ್ ಸಿಂಗ್ ಅವರನ್ನು 30943 ಮತಗಳ ಅಂತರದಿಂದ ಸೋಲಿಸಿದರು, ಇದು ಕ್ಷೇತ್ರದಲ್ಲಿ ಒಟ್ಟು ಮತಗಳ 15.68%. 2012ರಲ್ಲಿ ಎಸ್‌ಪಿ 46.9% ಮತ ಪಡೆದಿತ್ತು.

ಕರ್ಹಾಲ್: ಉನ್ನತ ಅಭ್ಯರ್ಥಿಗಳ ಸಂಪತ್ತು!
ಬಿಎಸ್ಪಿಯ ಕುಲದೀಪ್ ನಾರಾಯಣ್ 65 ಲಕ್ಷ ಮೌಲ್ಯದ ಆಸ್ತಿ ಹೊಂದಿದ್ದಾರೆ. ಅವರ ಒಟ್ಟು ಘೋಷಿತ ಆಸ್ತಿ 65.9 ಲಕ್ಷ ರೂ. ಇದರಲ್ಲಿ 21.9 ಲಕ್ಷ ಚರ ಆಸ್ತಿ ಮತ್ತು 44 ಲಕ್ಷ ಸ್ಥಿರ ಆಸ್ತಿ ಸೇರಿವೆ.

ಪ್ರೊ.ಎಸ್.ಪಿ.ಸಿಂಗ್ ಬಘೇಲ್ ಅವರ ಒಟ್ಟು ಘೋಷಿತ ಆಸ್ತಿ 8.8 ಕೋಟಿ ರೂ. ಇದರಲ್ಲಿ 84 ಲಕ್ಷ ಚರ ಆಸ್ತಿ ಮತ್ತು 7.9 ಕೋಟಿ ಸ್ಥಿರ ಆಸ್ತಿ ಸೇರಿವೆ. ಅವರ ಒಟ್ಟು ಘೋಷಿತ ಆದಾಯ 47.3 ಲಕ್ಷ ರೂ.ಗಳಲ್ಲಿ 31.7 ಲಕ್ಷ ಸ್ವಯಂ ಆದಾಯ. ಅವರ ಒಟ್ಟು ಹೊಣೆಗಾರಿಕೆ 63.3 ಲಕ್ಷ ರೂ.

ಅಖಿಲೇಶ್ ಯಾದವ್ ಘೋಷಿಸಿದ ಆಸ್ತಿ 40.1 ಕೋಟಿ ರೂ. ಇದರಲ್ಲಿ 13.3 ಕೋಟಿ ಚರ ಆಸ್ತಿ ಮತ್ತು 26.8 ಕೋಟಿ ಸ್ಥಿರ ಆಸ್ತಿ ಸೇರಿವೆ. ಅವರ ಒಟ್ಟು ಘೋಷಿತ ಆದಾಯ 1.4 ಕೋಟಿ ರೂ. ಅದರಲ್ಲಿ 84 ಲಕ್ಷ ಸ್ವಯಂ ಆದಾಯ. ಅಖಿಲೇಶ್ ಯಾದವ್ ಒಟ್ಟು 43.2 ಲಕ್ಷ ರೂ.

ಯುಪಿ ಚುನಾವಣಾ ಫಲಿತಾಂಶಗಳಲ್ಲಿ ಕರ್ಹಾಲ್ ಕ್ಷೇತ್ರವು ಏಕೆ ಆಕರ್ಷಣೆ ಕೇಂದ್ರ?
ಯುಪಿ ಇಂದು ಚುನಾವಣಾ ರಾಜ್ಯಗಳಲ್ಲಿ ಅತ್ಯಂತ ಹೆಚ್ಚು ಜನಸಂಖ್ಯೆ ಹೊಂದಿರುವ ರಾಜ್ಯವಾಗಿದೆ. ಯುಪಿಯಲ್ಲಿ, ಕರ್ಹಾಲ್ ಕ್ಷೇತ್ರವು ರಾಜಕೀಯ ರಣರಮಗವಾಗಿ ಮಾರ್ಪಟ್ಟಿದೆ. ಕರ್ಹಾಲ್ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಮತ್ತು ಬಿಜೆಪಿಯ ಕೇಂದ್ರ ಸಚಿವ ಎಸ್‌ಪಿ ಸಿಂಗ್ ಬಘೇಲ್ ನಡುವೆ ತೀವ್ರ ಪೈಪೋಟಿಗೆ ಸಾಕ್ಷಿಯಾಗಿದೆ. ಆದ ಕಾರಣ ಉತ್ತರ ಪ್ರದೇಶದ ಮೈನ್‌ಪುರಿ ಜಿಲ್ಲೆಯ ಕರ್ಹಾಲ್ ಕ್ಷೇತ್ರವು ಮೂರನೇ ಹಂತದ ವಿಧಾನಸಭಾ ಚುನಾವಣೆಯಲ್ಲಿ ಆಕರ್ಷಣೆಯ ಕೇಂದ್ರವಾಗಿದೆ.

ಅಭ್ಯರ್ಥಿಗಳ ವೈಯಕ್ತಿಕ ವಿವರ

ಕುಲದೀಪ್ ನಾರಾಯಣ್ ಯಾರು?
ಕುಲದೀಪ್ ನಾರಾಯಣ್ ಅವರು 2022 ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಕರ್ಹಾಲ್ ಕ್ಷೇತ್ರದಿಂದ ಬಿಎಸ್ಪಿ ಅಭ್ಯರ್ಥಿಯಾಗಿದ್ದಾರೆ. ಚುನಾವಣಾ ಆಯೋಗಕ್ಕೆ ಸಲ್ಲಿಸಿದ ಚುನಾವಣಾ ಅಫಿಡವಿಟ್ ಪ್ರಕಾರ ಅವರ ವೃತ್ತಿ ವ್ಯಾಪಾರ. 12ನೇ ತೇರ್ಗಡೆಯಾಗಿದ್ದು ಅವರಿಗೆ 42 ವರ್ಷ. ಈ ಬಿಎಸ್ ಪಿ ಅಭ್ಯರ್ಥಿ, ಚುನಾವಣಾ ಅಫಿಡವಿಟ್ ನಲ್ಲಿ ತನ್ನ ವಿರುದ್ಧ ೧೦ ಕ್ರಿಮಿನಲ್ ಪ್ರಕರಣ ದಾಖಲಾಗಿರುವುದಾಗಿ ಉಲ್ಲೇಖಿಸಿದ್ದಾರೆ.

ಅಖಿಲೇಶ್ ಯಾದವ್ ಯಾರು?
ಸಮಾಜವಾದಿ ಪಕ್ಷದ ಮುಖ್ಯಸ್ಥ ಮತ್ತು ಮಾಜಿ ಸಿಎಂ ಅಖಿಲೇಶ್ ಯಾದವ್ ಅವರು ಈ ಚುನಾವಣೆಯಲ್ಲಿ ಯೋಗಿ ಆದಿತ್ಯನಾಥ್ ಅವರಿಗೆ ಪ್ರಮುಖ ಸವಾಲಿನ ಅಭ್ಯರ್ಥಿಯಾಗಿದ್ದಾರೆ. ಯಾದವ್ ತಮ್ಮ ಕುಟುಂಬದ ಭದ್ರಕೋಟೆಯಾದ ಮೈನ್‌ಪುರಿಯಲ್ಲಿರುವ ಕರ್ಹಾಲ್ ಕ್ಷೇತ್ರದಿಂದ ಮೊದಲ ಬಾರಿಗೆ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ. ಈ ಎಸ್‌ಪಿ ಅಭ್ಯರ್ಥಿ, ಚುನಾವಣಾ ಅಫಿಡವಿಟ್ ನಲ್ಲಿ ತನ್ನ ವಿರುದ್ಧ ಯಾವುದೇ ಕ್ರಿಮಿನಲ್ ಪ್ರಕರಣಗಳಿಲ್ಲ ಎಂದು ಉಲ್ಲೇಖಿಸಿದ್ದಾರೆ.

ಪ್ರೊ.ಎಸ್.ಪಿ.ಸಿಂಗ್ ಬಘೇಲ್ ಯಾರು?
ಪ್ರೊ.ಎಸ್.ಪಿ.ಸಿಂಗ್ ಬಘೇಲ್ ಅವರು 2022ರ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಕರ್ಹಾಲ್ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ. ಒಮ್ಮೆ ಎಸ್‌ಪಿ ಪಿತಾಮಹ ಮತ್ತು ಅಖಿಲೇಶ್ ಅವರ ತಂದೆ ಮುಲಾಯಂ ಸಿಂಗ್ ಯಾದವ್‌ಗೆ ಪ್ರಮುಖ ಸಹಾಯಕರಾಗಿದ್ದರು. ಇದೀಗ ಬಿಜೆಪಿ ಅಭ್ಯರ್ಥಿಯಾಗಿರುವ ಅವರು ಚುನಾವಣಾ ಅಫಿಡವಿಟ್ ನಲ್ಲಿ ತನ್ನ ವಿರುದ್ಧ ಎರಡು ಎರಡು ಕ್ರಿಮಿನಲ್ ಪ್ರಕರಣ ದಾಖಲಾಗಿರುವ ಬಗ್ಗೆ ಉಲ್ಲೇಖಿಸಿದ್ದಾರೆ.

Share