Connect with us


      
ಸಾಮಾನ್ಯ

ಬಜೆಟ್ ಏನಿದ್ದರೂ ಮಧ್ಯಮ ವರ್ಗದ ನಿರೀಕ್ಷೆ !

Kumara Raitha

Published

on

ನಾನು ಬಹಳ ಚಿಕ್ಕವಳಿದ್ದಾಗ ಭಾರತ ಪಾಕಿಸ್ತಾನದ ಯುದ್ಧ ಅನ್ನುವ ಮಾತು ಬಂದಾಗೆಲ್ಲ; ಮಲೆನಾಡಿನ ಜನ ಹಾಗಾದರೆ ಅಡಿಕೆ ಧಾರಣೆ ಬಿದ್ದೋಗತ್ತಾ ಅಂತ ಮಾತಾಡಿಕೊಳ್ಳೋರು!  ಪಾಕಿಸ್ತಾನಕ್ಕೆ ಅಡಿಕೆ ರಫ್ತಾಗುತ್ತಿತ್ತು… ಅಡಿಕೆ ಬೆಳೆಗಾರರಿಗೆ ಜೀವನದ ಮೂಲ ಆದಾಯ ಅದು.   ಜನರಿಗೆ  ಅವರ ಮುಂದಿನ ಜೀವನದ ಮೇಲೆ ಯುದ್ದ ಯಾವ ಪರಿಣಾಮ ಬೀರತ್ತೆ ಅನ್ನುವ ಆತಂಕವೇ ಮೊದಲು…ಯುದ್ಧದಂತ ಯುದ್ದವೇ ನಮ್ಮ ಜನರಿಗೆ ಮುಂದಿನ ಬದುಕು ಆದಾಯ ಅವುಗಳಿಗಷ್ಟೇ ಕನೆಕ್ಟ್ ಆಗುವಂತಹುದು ಅಂದಾಗ ಬಜೆಟ್ ಎಷ್ಟರಮಟ್ಟಿಗೆ ಸಾಮಾನ್ಯ ಜನರಿಗೆ ಕನೆಕ್ಟ್ ಆಗತ್ತೆ ಎನ್ನುವುದು ನನಗೆ ಅಚ್ಚರಿಯಾಗೇ ಉಳಿದಿದೆ…

” ಅವ್ವೊ ಮಾವ ಬಂತು” ಅಂದರೆ,

“ಬರ್ಲೇಳು ಕುದಿಯೊ ಗಂಜೀಗೆ ಇನ್ನರ್ಧ ಪಾವು ನುಚ್ಚಾಕಿದ್ರಾತು…” ಇದು  ಕೂಲಿಕಾರರ ನಿಸೂರತೆ ನಿಸ್ಸಾಯಕತೆ ಅದಕ್ಕಿಂತ ಹೆಚ್ಚು  ನಿರೀಕ್ಷೆ ಮಾಡಲಾಗದ ಬದುಕು ! ಆ ಅರ್ಧ ಪಾವು ನುಚ್ಚು ಅಂದರೆ ಮೂರು ಮುಷ್ಟಿ! ಮೂರು ದಿನ ಮಾಡುವ ಗಂಜಿಯಲ್ಲಿ ಒಂದೊಂದು ದಿನ ಮುಷ್ಟಿಯಷ್ಟು ಕಡಿಮೆ ಹಾಕಿ ಸರಿದೂಗಿಸಿದರೆ ಅವರ ಆರ್ಥಿಕತೆ ಸಮತೋಲನ…

ಮನೆ ಕೆಲಸದ ಸಹಾಯಕಿ ‘ಆಂಟಿ ಎಲ್ಲಾ ಸಾಮಾನುಗಳ ಬೆಲೆ ಅದೆಷ್ಡು ಜಾಸ್ತಿ ಆಗಿದೆ..ತರೊ ರೇಷನ್ನೆಲ್ಲ ಮೊದಲಿಗಿಂತ ಒಂಚೂರು ಕಮ್ಮೀನೆ ಆದರೆ ತಿಂಗಳಿಗೆ ಎರಡೂವರೆ ಸಾವಿರ ಜಾಸ್ತಿ ಖರ್ಚಾಗ್ತಾ ಇದೆ.  ಇನ್ನೊಂದು ಮನೆ ಕೆಲಸಕ್ಕೆ ನೋಡಬೇಕು..ಇನ್ನೂ ಬೇಗ ಏಳಬೇಕು…ಇದು ಅವಳಂತವರ  ಆರ್ಥಿಕ  ಕೊರತೆಯನ್ನು ಸರಿದೂಗಿಸುವ ದಾರಿ..

ಬಜೆಟ್ ಏನಿದ್ದರೂ ಮಧ್ಯಮ ವರ್ಗದ ಸೊತ್ತು…ನಿರೀಕ್ಷೆ ನಿರಾಸೆ ಬಹುಪಾಲು ಅವರದು. ಶ್ರೀಮಂತರಿಗೇನಿದ್ದರೂ ಅವು ಇನ್ನಷ್ಟು ಸವಲತ್ತು ನೀಡುವ ಸಾಧನ. ಜಿಡಿಪಿ ಜಿಎಸ್ಟಿ ಟಿಡಿಎಸ್ ಬಡತನ ರೇಖೆ ಇವುಗಳೆಲ್ಲ ಬಹಳ ಸುಲಭವಾಗಿ ಸಾಮಾನ್ಯ ಜನತೆಯ ಅರಿವಿಗೆ ನಿಲುಕುವುದಲ್ಲ..ಪೆಟ್ರೋಲ್ ಬೆಲೆ ,ಗ್ಯಾಸ್ ಬೆಲೆ , ಟಿವಿ ವಾಶಿಂಗ್ ಮಿಶೀನ್ ,ರೈತರಾದರೆ ರಸಗೊಬ್ರ ಸಬ್ಸಿಡಿ, ಸಂಬಳದಾರರಿಗೆ ತೆರಿಗೆ ವಿನಾಯಿತಿ ಇವುಗಳಷ್ಟೇ  ಸಾಮಾನ್ಯರ ಬಜೆಟ್..ಕೊಳ್ಳಲಿ ಕೊಳ್ಳದೇ ಇರಲಿ ಚಿನ್ನಬೆಳ್ಳಿಯ ಬೆಲೆ ಮಹಿಳೆಯರಿಗೆ ಒಂದಿಷ್ಟು ಕುತೂಹಲ…ಅದರಂದಾಚೆಯ ಚರ್ಚೆ ಏನಿದ್ರೂ ರಾಜಕೀಯ ಪಕ್ಷಗಳ ಕೆಸರೆರಚಾಟ ಸಮರ್ಥನೆ…ಮಾಧ್ಯಮಗಳಲ್ಲಿ ಬಿಸಿಬಿಸಿ ಚರ್ಚೆ…

ಪ್ರತಿ ವರ್ಷ ಬಜೆಟ್ ಬರತ್ತೆ ಫೆಬ್ರವರಿ ಕೊನೆಯಲ್ಲಿದ್ದದ್ದು ಈಗ ಮೊದಲಿಗಾಗಿದೆ 2014 ರಿಂದ ಬಿಜೆಪಿ ಸರ್ಕಾರ ಬಂದ ಮೇಲೆ…90 ರಿಂದ120 ನಿಮಿಷಗಳ ಕಾಲ ಇರುತ್ತಿದ್ದ ಬಜೆಟ್ ಮಂಡನೆ ಈಗ ಇನ್ನಷ್ಟು ಉದ್ದವಾಗಿದೆ…2020 ರಲ್ಲಿ ವಿತ್ತ ಸಚಿವೆ ಶ್ರೀಮತಿ ನಿರ್ಮಲಾ ಸೀತರಾಮನ್ ತೆಗೆದುಕೊಂಡ ಸಮಯ ಎರಡುಗಂಟೆ ನಲವತ್ತು ನಿಮಿಷ!! ಅತಿ ಧೀರ್ಘಾವಧಿಯ ಬಜೆಟ್ ಭಾಷಣ.

ಈ ಬಾರಿ ವಿತ್ತ ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಸಮಯ ಸ್ವಲ್ಪ ಮೊಟಕುಗೊಳಿಸಿದರು ಅನ್ನುವುದು ಬಿಟ್ಟರೆ ಕಳೆದ ವರ್ಷದ ಬಜೆಟ್ಗೂ ಈ ವರ್ಷಕ್ಕೂ ಬಹಳ ವ್ಯತ್ಯಾಸ ಏನೂ ಇಲ್ಲ.  ಈ ಸರ್ಕಾರದ ಹೆಗ್ಗಳಿಕೆಯ ವಿಷಯವೆಂದರೆ ಎಲ್ಲರೂ ಅದ್ಭುತ ಭಾಷಣಕಾರರು  ಪ್ರಧಾನಿ ಮೊದಲ್ಗೊಂಡು!!  ನಮ್ಮ ವಿತ್ತ ಸಚಿವೆ ಬಹಳ ಗಡಸು ಅಥವಾ ಧಾಡಸಿ ವ್ಯಕ್ತಿತ್ವ ಜೊತೆಯಲ್ಲಿ ಅದಕ್ಕೆ ತಕ್ಕ “ಡಾಮಿನೇಟಿಂಗ್ ವಾಯ್ಸ್” . ನಮ್ಮ ಪ್ರಾಚೀನ ಗ್ರಂಥಗಳಿಂದ ಜ್ಙಾನ ಪಡೆದುಕೊಳ್ಳುವುದರಿಂದ ನಾವು ನಿರಂತರ ಪ್ರಗತಿಯತ್ತ ನಡೆಯಲು ಸಾಧ್ಯ ಎಂದು ಹೇಳುತ್ತಾ ಮಹಾಭಾರತದ ಶ್ಲೋಕವೊಂದನ್ನು ಉದಾಹರಿಸುತ್ತಾ ಬಜೆಟ್ ಭಾಷಣ ಶುರು ಮಾಡಿದರು…ಆ ಶ್ಲೋಕದ ಅರ್ಥ

 ” ರಾಜನು  ಸೋಮಾರಿಯಾಗಿರದೆ , ಧರ್ಮಾನುಕೂಲವಾಗಿ ಪ್ರಜೆಗಳಿಂದ ಕರವನ್ನು ಪಡೆದು ನೀತಿಶಾಸ್ತ್ರಾನುಸಾರವಾಗಿ ದೇಶವನ್ನು ಪರಿಶೀಲಿಸುತ್ತಾ ಜಾಗರೂಕನಾಗಿ ಪ್ರಜೆಗಳ ಯೋಗಕ್ಷೇಮ ವ್ಯವಸ್ಥೆ ಮಾಡಬೇಕು”

ಎಷ್ಟು ಚೆನ್ನಾಗಿದೆ ಓದಲು ಕೇಳಲು.  ನಮ್ಮ ಪ್ರಧಾನಿಗಳು ದಿನಕ್ಕೆ ಹದಿನೆಂಟು ಗಂಟೆ ಕೆಲಸ ಮಾಡುತ್ತಾ ಬಿಡುವಿನ ವೇಳೆಯಲ್ಲಿ ನವಿಲುಗಳಿಗೆ ಕಾಳು ಹಾಕುವ ಕೆಲಸ ಕೂಡಾ ಮಾಡುತ್ತಾರೆ!  ಪ್ರಾಚೀನ ಗ್ರಂಥಗಳ ಪಾಲನೆ ಮಾಡುವ ಪ್ರಧಾನಿ ಪೂರ್ವಜನ್ಮದ ಪುಣ್ಯವೆಂದು ಪರಿಭಾವಿಸುವುದು ಅನಿವಾರ್ಯವಾಗಿದೆ.

ಮುಂದಿನ ಇಪ್ಪತೈದು ವರ್ಷಗಳಿಗೆ ಮಾರ್ಗದರ್ಶನ ಮಾಡುವ ಬಜೆಟ್ ಎನ್ನುವ ಗಟ್ಟಿ ಆತ್ಮವಿಶ್ವಾಸದೊಂದಿಗೆ ಶುರು ಮಾಡಿ ಜನರ ಮೇಲೆ ತೆರಿಗೆ ವಿಧಿಸಿ ಒಂದೇ ಒಂದು ರೂಪಾಯಿ ಕೂಡಾ ಗಳಿಸಲು ನಾನು ಪ್ರಯತ್ನಿಸಿಲ್ಲ. ಜನರಿಗೆ ಹೊರೆಯಾಗಬಾರದೆಂದು ಪ್ರಧಾನಿ ಮೋದಿಯವರ ಕಟ್ಡಪ್ಪಣೆಯಾಗಿದೆ ಎಂದು ವಿತ್ತ ಸಚಿವೆ ವಿನಮ್ರವಾಗಿ ಹೇಳಿದರು!

ಹೌದು ಕಳೆದ ವರ್ಷದ ಬಜೆಟ್ ನಂತೆ ಈ ವರ್ಷವೂ ಇರುವಾಗ ಇನ್ನು ಇಪ್ಪತೈದು ವರ್ಷಗಳಿಗೂ ಇದೇ ಮಾರ್ಗದರ್ಶನವಾಗುವಂತಿರಬೇಕಾದರೆ, ಇನ್ನು ದಿನಾಂಕಗಳಷ್ಟೇ ಬದಲಿ ಮಾಡಿದರೂ ನಡೆಯುತ್ತದೆ.

ಕೊರೊನಾ ಬಿಕ್ಕಟ್ಟು ಇಡೀ ಜಗತ್ತಿಗೇ ಬಂದಿದೆ.  ಅದರಿಂದ ಚೇತರಿಸಿಕೊಳ್ಳುವ ನಿಟ್ಟಿನಲ್ಲಿ ನೀವು ಬಜೆಟ್ ನಿಂದ ಏನನ್ನಾದರೂ ನಿರೀಕ್ಷಿಸಿದ್ದರೆ ಅದು ನಿಮ್ಮ ಮೂರ್ಖತನ.  ಲಕ್ಷಾಂತರ ಉದ್ಯಮಗಳು ನೆಲಕಚ್ಚಿವೆ…ಅಸಂಘಟಿತ ವಲಯಗಳ ಉದ್ಯಮ ಮುಚ್ಚಿಹೋದದ್ದೂ ಲೆಕ್ಕಕ್ಕೆ ಸಿಗುವುದಿಲ್ಲ!!!  ನಷ್ಟದಲ್ಲಿ ನಡೆಯುತ್ತಿರುವ ಉದ್ಯಮಗಳನ್ನು ಪುನಶ್ಚೇತನ ಗೊಳಿಸಬಹುದು…ಆದರೆ ಮುಚ್ಚಿಹೋದ ಉದ್ಯಮಗಳನ್ನು ಅಲ್ಲ! ಮೂರ್ಚೆ ಹೋದವರನ್ನು ಎಚ್ಚರಗೊಳಿಸಬಹುದು ಸತ್ತವರನ್ನಲ್ಲ!!!

ಒಂದು ಸಮೀಕ್ಷೆಯ ಪ್ರಕಾರ 84% ಜನತೆಗೆ ಈ ದಿನ ಕೊರೊನಾ ಕಾರಣದಿಂದ ಬಿಕ್ಕಟ್ಟು ಸಂಭವಿಸಿದೆ. ಉಳಿದ ಹದಿನಾರು ಪರ್ಸೆಂಟ್ ಜನರಲ್ಲಿ ಒಂದೆರಡು ಪರ್ಸೆಂಟ್ ಅದಾನಿ ಅಂಬಾನಿಯಂತವರು ಕೊರೊನಾ ನಂತರ ಹೆಚ್ಚಿನ ಲಾಭ ಗಳಿಸಿದ್ದರೆ ಇನ್ನುಳಿದ ಹದಿನಾಲ್ಕು ಪರ್ಸೆಂಟ್ ಜನ ಎಂದಿನಂತೆ ಲಾಭ ಗಳಿಸುತ್ತಿದ್ದಾರೆ.   ಅವರಿಗೆ ಕೊರೊನಾ ಅಂತಹ ವ್ಯತ್ಯಾಸವನ್ನೇನೂ ಮಾಡಿಲ್ಲ. ನಮ್ಮ ಸಂಖ್ಯೆ ದೊಡ್ಡದಿದೆ 84%…ಬಹುಸಂಖ್ಯಾತರು ಎನ್ನುವುದೇ ಹೆಮ್ಮೆಯ ವಿಷಯ. ಎಲ್ಲರಿಗೂ ಆದದ್ದು ನಮಗೂ ಆಗಿದೆ ಸಮಾಧಾನ ಮಾಡಿಕೊಳ್ಳಿ.

ಸಂಬಳದಾರರಿಗೆ ತೆರಿಗೆ ವಿನಾಯಿತಿ ನೀಡಿಲ್ಲ…ಒಂದಷ್ಡು ಅಸಮಾಧಾನ…ಬ್ಯಾಂಕ್ ಠೇವಣಿಗೆ ಹೆಚ್ಚಿನ ಬಡ್ಡಿದರ ಇಲ್ಲ. ಜನ ಈಗಾಗಲೇ ಮ್ಯೂಚುಯಲ್ ಫಂಡ್ ಕಡೆ ಮುಖ ತಿರುಗಿಸಿದ್ದಾರೆ ಬಿಡಿ.  ಅಧಿಕಾರಕ್ಕೆ ಬಂದಾಗ ಪ್ರತಿ ವರ್ಷ ಎರಡು ಕೋಟಿ ಜನರಿಗೆ ಉದ್ಯೋಗ ನೀಡುವ ಭರವಸೆ ನೀಡಿತ್ತು…ಈ ವರ್ಷ ಅರವತ್ತು ಲಕ್ಷ ಜನರಿಗೆ ಉದ್ಯೋಗ ನೀಡುವ ಭರವಸೆ ನೀಡಿದ್ದಾರೆ ಹಣಕಾಸು ಸಚಿವೆ. ಬಹುಶಃ ಈ ಏಳು ವರ್ಷಗಳಲ್ಲಿ ಹದಿನಾಲ್ಕು ಕೋಟಿ ಜನಕ್ಕೆ ಕೆಲಸ ಸಿಕ್ಕಿದೆ ಎಂದು ಭಾವಿಸಬೇಕು. ಏಕೆಂದರೆ, ನಮ್ಮ ಪ್ರಾಚೀನ ಗ್ರಂಥಗಳು ಯಾವಾಗಲೂ ಒಳ್ಳೆಯದನ್ನೇ ಯೋಚಿಸಿ ಎಂದು ಹೇಳುತ್ತವೆ!

ಉದ್ಯೋಗ ಖಾತ್ರಿ ಯೋಜನೆ ನಾಪತ್ತೆಯಾಗಿದೆ.  ಗ್ರಾಮೀಣ ಉದ್ಯಮಶೀಲತೆಗೆ ಒತ್ತುಕೊಡುವ ಕ್ರಮ ಯಾವುದೂ ಕಾಣಿಸಲಿಲ್ಲ. ಪ್ರಾಥಮಿಕ ಆರೋಗ್ಯ ಕೇಂದ್ರಗಳ ಸುಧಾರಣೆ ಇಲ್ಲ. ಗೋ ಕೊರೊನಾ ಅಂತ ಹಾಡು ಹೇಳುವುದರಿಂದ ಸುಧಾರಣೆಯ ಅಗತ್ಯವೂ ಇರಲಿಕ್ಕಿಲ್ಲ.  ರಸಗೊಬ್ಬರದ ಮೇಲಿನ ಸಬ್ಸಿಡಿ ಕಡಿತಗೊಳಿಸಲಾಗಿದೆ…ಗ್ಯಾಸ್ ಸಬ್ಸಿಡಿ ಕೂಡಾ ಕಡಿತವಾಗಿದೆ….ಸಾಲದ ಮೇಲಿನ ಚಕ್ರಬಡ್ಡಿ ಮನ್ನಾ ಮಾಡಿದ್ದಾರೆ ಆದ್ದರಿಂದ ಉಳಿದ ದುಡ್ಡಲ್ಲಿ ರಸಗೊಬ್ಬರ ಗ್ಯಾಸ್ ಕೊಳ್ಳಿ!!!

ಮಾಧ್ಯಮದವರು  ಟ್ಯಾಕ್ಸ್ ಹೊರೆ ಇಳಿಯುತ್ತಾ? ಕೃಷಿಕರಿಗೆ ಖುಷಿ ಸಿಗತ್ತಾ?  ಎನ್ನುತ್ತಾ ಸುಮ್ಮನೆ ಅರ್ಥವಿಲ್ಲದ ಪ್ರಶ್ನೆ ಕೇಳುತ್ತಿದ್ದಾರೆ. ಯಾರಿಗೆ ಬೇಕು ಬಜೆಟ್? ಅದೊಂದು ಗಂಗಾರತಿ ರೀತಿಯ ಕಾರ್ಯಕ್ರಮ! ತಪ್ಪದೆ ಅದೇ ಮುಹೂರ್ತಕ್ಕೆ ನಡೆಯುತ್ತದೆ. ಬಡವರ ಜೀವನ ತನ್ನಷ್ಟಕ್ಕೆ ತಾನೇ ಏಳುತ್ತಾ ಬೀಳುತ್ತಾ ನಡೆಯುತ್ತದೆ ಅಥವಾ ಮುಳುಗುತ್ತದೆ. ದಿನಾ ಸಾಯುವವರಿಗೆ ಅಳುವವರಾರು?

ಬಡವರು ತಿನ್ನಲಿಕ್ಕೆ ಗತಿಯಿಲ್ಲದೆ ಸಾಯಬಹುದು…ಶ್ರೀಮಂತರು ತಿಂದದ್ದು ಅರಗಿಸಿಕೊಳ್ಳಲಾಗದೆ ಸಾಯಬಹುದು..ಸಾವಂತೂ ನಿಶ್ಚಯ!  ಊರಿಗೇ ಕೇಡಾದರೆ ಯಾರಿಗೊ ಪಾಡಾಗುವುದಂತೆ!

ಮತ್ತೆ ಇತಿಹಾಸದಲ್ಲಿ ವಿದ್ಯಾರಣ್ಯರು ” ರಾಜ್ಯವು ನನ್ನದೂ ಅಲ್ಲ, ನಿನ್ನದೂ ಅಲ್ಲ ವಿರೂಪಾಕ್ಷ ದೇವನದು” ಎಂದು ಭಕ್ತಿಪೂರ್ವಕ ಒಪ್ಪಿ ದೈವ ಸಾಕ್ಷಿಯಾಗಿ ನಡೆದರಂತೆ…ವಿಜಯನಗರ ಬಲಾಢ್ಯವಾಗಲು ತಳಹದಿ ಹಾಕಿದರಂತೆ! ಇದನ್ನು ಮುಂದಿನ ವಿತ್ತ ಮಂತ್ರಿಗಳ ಬಜೆಟ್ ಭಾಷಣದಲ್ಲಿ  ಸೇರಿಸಿಕೊಳ್ಳಲು ಹೇಳಬೇಕು. ಇತಿಹಾಸ ಆಗಾಗ ತಿರುವಿ ಹಾಕಬೇಕು.

ಆದರೂ ನನ್ನದೊಂದು ವಿನಂತಿ ಸಾಮಾನ್ಯ ಜನತೆ ಬಜೆಟ್ ಗೊತ್ತಿಲ್ಲದೆ ಬದುಕುವುದೇ ಒಳ್ಳೆಯದು..” ನೆರೆದ ಭಾಗ್ಯವೆಲ್ಲ ಹರಿದು ಹೋಯಿತೆನುತ ತಿರುಕ ಮರಳಿ ನಾಚ ತೊಡಗಿದನಂತೆ ತಿರಿವುದ”  ಎಚ್ಚೆತ್ತರೆ  ತಲೆತಗ್ಗಿಸಬೇಕಾಗಬಹುದು.

# ಶಾಂತಾಕುಮಾರಿ.

ಲೇಖಕರ ಪರಿಚಯ:

ಶಾಂತಕುಮಾರಿ ಅವರು ಮೂಲತಃ ಉದ್ಯಮಿ, ಕಂಫ್ಯೂಟರ್‌ ಬಂದ ಹೊಸತರಲ್ಲಿಯೇ ಅದರ ಸಾಧ್ಯತೆಗಳೆವನ್ನು ದುಡಿಸಿಕೊಳ್ಳಲು ಆರಂಭಿಸಿದವರು. ಇತ್ತೀಚೆಗೆ ಓಟಿಟಿ ವೇದಿಕೆಯಲ್ಲಿಯೂ ಅವರು ಉದ್ಯಮದ ಕಾರ್ಯಶೀಲತೆ ವಿಸ್ತರಿಸಿಕೊಂಡಿದ್ದಾರೆ. ಅವರ ಬರೆಹಗಳೆಂದರೆ ನನಗೆ ಸದಾ ಬೆರಗು. ಅವುಗಳಲ್ಲಿ ತಿಳಿಹಾಸ್ಯ, ವಿಡಂಬನೆ- ಮೊನಚು – ವ್ಯಂಗ್ಯ ಎಲ್ಲವೂ ಸಮ್ಮಿಳಿತವಾಗಿರುತ್ತದೆ. ಈ ಮಾದರಿ ಬರೆಹ ಎಲ್ಲರಿಗೂ ಸಿದ್ಧಿಸುವುದು ಕಷ್ಟಸಾಧ್ಯವೇ ಸರಿ. ಮುಖ್ಯವಾಗಿ ಇವರು ಸಾಮಾಜಿಕ ಜಾಲತಾಣಗಳನ್ನು ಕಾಡುಹರಟೆಯ ವೇದಿಕೆಯೆಂದು ಭಾವಿಸಿಲ್ಲ. ಈ ಕಾರಣದಿಂದಲೇ ಇವರು ಕಂಡ ವಿಷಯ – ವಿಚಾರಗಳು ಬರೆಹ ರೂಪಕ್ಕಿಳಿದು ಓದುಗರಿಗೆ ಏಕಕಾಲದಲ್ಲಿ ವಿಚಾರ ಮಥನೆಗೂ, ಸಮಾಧಾನಕ್ಕೂ ಕಾರಣವಾಗುತ್ತದೆ. ಸಮಾಧಾನ ಅಂತ ಏಕೆ ಹೇಳಿದೆ ಎಂದರೆ ಇವರು ಆಪ್ತ ಸಮಾಲೋಚಕರು ಸಹ. ಇವರು “ಸೂರಂಚಿನ ನೀರು” ಹೆಸರಿನಲ್ಲಿ ಬರೆಯುವ ಅಂಕಣ   ಪ್ರತಿ ಭಾನುವಾರ ಪ್ರಕಟವಾಗುತ್ತದೆ ಎಂದು ತಿಳಿಸಲು ಹರ್ಷವಾಗುತ್ತದೆ.

Share