Connect with us


      
ಕರ್ನಾಟಕ

“ಕೆ.ಎಸ್.ಈಶ್ವರಪ್ಪ ಏಪ್ರಿಲ್ 15ರಂದು ರಾಜೀನಾಮೆ ಕೊಟ್ಟಿದ್ಯಾಕೆ?”

Iranna Anchatageri

Published

on

ಬೆಂಗಳೂರು: ಏಪ್ರಿಲ್ 18 (ಯು.ಎನ್.ಐ.)  ಉಡುಪಿಯಲ್ಲಿ ಏಪ್ರಿಲ್ 12 ರಂದು ಸಂಭವಿಸಿದ ಗುತ್ತಿಗೆದಾರ ಸಂತೋಷ್ ಅವರ ನಿಗೂಢ ಸಾವು ಭ್ರಷ್ಟಾಚಾರಿ ವ್ಯವಸ್ಥೆ ಮಾಡಿಸಿದ ವ್ಯವಸ್ಥಿತ ಕೊಲೆ ಆಗಿದೆ. 1 ಲಕ್ಷ ಕೋಟಿ ರೂಪಾಯಿ ಟೆಂಡರ್ ಗಳಲ್ಲಿ ಅವ್ಯವಹಾರ ನಡೆದಿದೆ ಎಂದು ಆಲಂ ಪಾಷಾ ಗಂಭೀರ ಆರೋಪ ಮಾಡಿದ್ದಾರೆ.

ಇದು ರಾಜ್ಯದ ಜನಸಾಮಾನ್ಯರಿಗೆ ಅರ್ಥವಾಗಿದೆ. ಆದರೆ ಸಾವಿಗೆ ಮೂಲ ಕಾರಣವಾದ ಭ್ರಷ್ಟಾಚಾರದ ಬಗ್ಗೆ ಒಂದಕ್ಷರವನ್ನೂ ಹೇಳದೆ ಉಡುಪಿಯ ಪೊಲೀಸರು 2022ರ ಏಪ್ರಿಲ್ 13ರಂದು ಎಫ್‌ಐಆರ್ ದಾಖಲಿಸಿದ್ದಾರೆ. ಭ್ರಷ್ಟಾಚಾರಕ್ಕೆ ಸಂಬಂಧಿಸಿದ ಕಡತಗಳನ್ನು ಪೊಲೀಸರು ಎಸಿಬಿಗೆ ನೀಡದೆ ಇರುವುದರಿಂದ ಸ್ವ ಇಚ್ಛೆಯಿಂದ ನಾನು ಏಪ್ರಿಲ್ 16ರಂದು ಎಸಿಬಿ ಎಡಿಜಿಪಿಯವರಿಗೆ ದಿ.ಸಂತೋಷ್ ಶೇ.40ರ ಕಮಿಷನ್ ಆರೋಪ ಮಾಡಿರುವ ಬಗ್ಗೆ ದೂರು ನೀಡಿದ್ದೇನೆ. ಈಶ್ವರಪ್ಪ ಅವರು ತಮ್ಮ ವಿರುದ್ಧ ಎಫ್‌ಐಆರ್ ಆದ ದಿನ ಏ.13ರಂದು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡದೆ ಏ.15ರಂದು ರಾತ್ರಿ 8.30ರ ಮುಹೂರ್ತಕ್ಕೆ ರಾಜೀನಾಮೆ ಕೊಟ್ಟರು ಯಾಕೆ? ಈ ನಡುವೆ ಸಂತೋಷ್ ಸಾವಿಗೆ ಸಂಬಂಧಿಸಿದ ಸಾಕ್ಷ್ಯಗಳನ್ನು ನಾಶಪಡಿಸಿದರೆಂಬ ಗುಮಾನಿಯಿದೆ ಎಂದರು.

ಗ್ರಾಮೀಣಾಭಿವೃದ್ಧಿ ಇಲಾಖೆಯ 4 ಕೋಟಿ ರೂ. ಮೌಲ್ಯದ 108 ಗುತ್ತಿಗೆ ಕಾಮಗಾರಿಗಳಿಗೆ ಸಂಬಂಧಿಸಿ ಕಾರ್ಯಾದೇಶ, ಸ್ಥಳೀಯ ಶಾಸಕರು, ಪಂಚಾಯತ್, ಅಧಿಕಾರಿಗಳ ಅನುಮತಿ ಯಾವುದೂ ಇಲ್ಲದೆ ನಡೆದ ಕಾಮಗಾರಿಗಳ ಮಹಾ ಅಕ್ರಮದ ಸಾಕ್ಷ್ಯಗಳನ್ನು ನಾಶಪಡಿಸಿದ ಬಳಿಕ ಈ ಮುಹೂರ್ತದಲ್ಲಿ ರಾಜೀನಾಮೆ ನೀಡಿದ್ದಾರೆ. ಪೊಲೀಸರು ಈಶ್ವರಪ್ಪ ವಿರುದ್ಧ ಹಾಕಿರುವ ಸೆಕ್ಷಗಳು ತೀರಾ ಬಾಲಿಶವಾಗಿದೆ. ಸಂತೋಷ್ ಮಾಡಿರುವ ಮೂಲ ಆರೋಪಗಳ ಬಗ್ಗೆ ಎಫ್‌ಐಆರ್‌ನಲ್ಲಿ ಉಲ್ಲೇಖವೇ ಇಲ್ಲ. ಶೇ.40 ಕಮಿಷನ್ ಪಡೆದಿದ್ದಾರೆನ್ನುವ ಪ್ರಮುಖ ಆರೋಪವೇ ಎಫ್‌ಐಆರ್‌ನಲ್ಲಿ ಇರಬೇಕಿತ್ತು. ಈಶ್ವರಪ್ಪ ರಾಜೀನಾಮೆಗೂ ಮುನ್ನ ಭಾರೀ ಪ್ರಮಾಣದ ಕಮಿಷನ್ ಅಕ್ರಮ ವ್ಯವಹಾರ ನಡೆದಿರುವ ಸಾಧ್ಯತೆ ದಟ್ಟವಾಗಿ ಕಾಣಿಸುತ್ತಿದೆ ಎಂದು ಆಲಂ ಪಾಷಾ ಹೇಳಿದರು.

ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ ತರಾತುರಿಯಲ್ಲಿ 5,500 ಕೋ ರೂ.ಗಳ ಟೆಂಡರ್‌ಗಳಿಗೆ ಕೇವಲ 8 ದಿನದಲ್ಲಿ ಮಂಜೂರಾತಿ ನೀಡಲಾಗಿದೆ. ಕೆಟಿಪಿಐ ಆಕ್ಟ್ ಪ್ರಕಾರ ಟೆಂಡರ್ ಪ್ರಕ್ರಿಯೆ ಕನಿಷ್ಟ 30 ದಿನಗಳವರೆಗೆ ಇರಬೇಕು. ಆದರೆ ಇಲ್ಲಿ ಏ.21ಕ್ಕೆ ಮುಗಿಯುವಂತೆ ಕೇವಲ 8 ದಿನಗಳಲ್ಲಿ ಕೇಂದ್ರ ಸರ್ಕಾರದ ಯೋಜನೆಯಡಿಯ 5,500 ಕೋ. ರೂ.ಗಳ ಟೆಂಡರ್‌ಗಳನ್ನು ನೀಡಲಾಗಿದೆ. ನಿಯಮದಂತೆ ಟೆಂಡರ್ ಪ್ರಕ್ರಿಯೆಗೆ ನಿವೃತ್ತ ಹೈಕೋರ್ಟ್ ನ್ಯಾಯಮೂರ್ತಿಗಳನ್ನು ನೇಮಿಸಿಲ್ಲ. ಅಲ್ಲದೆ 15,000 ಕೋಟಿ ರೂ.ಗಳ 62 ಕಾಮಗಾರಿಗಳಿಗೂ ಟೆಂಡರ್‌ ಕಮಿಟಿ ಒಪ್ಪಿಗೆ ನೀಡದಿದ್ದರೂ 6-10 ದಿನಗಳಲ್ಲಿ ಮಂಜೂರು ಮಾಡಲಾಗಿದೆ. ನಿರ್ದಿಷ್ಟ ಗುತ್ತಿಗೆದಾರರಿಗೆ ಬೇಕಾದಂತೆ ಟೆಂಡರ್ ಮ್ಯಾಚ್ ಫಿಕ್ಸಿಂಗ್ ನಡೆಯುತ್ತಿದೆ. ಇದು ಈಶ್ವರಪ್ಪರ ಇಲಾಖೆಯಲ್ಲೊಂದಷ್ಟೇ ಅಲ್ಲ, ಇಡೀ ರಾಜ್ಯದಲ್ಲೇ ಈ ತರಹದಲ್ಲಿ ಶೇ.40ರ ಕಮಿಷನ್ ಅವ್ಯವಹಾರ ಎಗ್ಗಿಲ್ಲದೆ ನಡೆಯುತ್ತಿದೆ. ಕೇಂದ್ರ ಸರ್ಕಾರದ 1 ಲಕ್ಷ ಕೋಟಿ ರೂ. ಅನುದಾನವನ್ನು ದುರ್ಬಳಕೆ ಮಾಡಲಾಗಿದೆ. ಕೇವಲ 7-8 ದಿನಗಳಲ್ಲಿ ಕಳ್ಳಹಾದಿಯಲ್ಲಿ ಟೆಂಡರ್ ಪಡೆದವರು, ಗ್ರಾಮೀಣ ಜನತೆಗೆ ಹೇಗೆ ಒಳ್ಳೆಯ ರಸ್ತೆ, ನೀರು, ಮೊದಲಾದ ಕಾಮಗಾರಿಗಳನ್ನು ಮಾಡಬಲ್ಲರು? ಎಂದು ಪ್ರಶ್ನೆ ಮಾಡಿದರು.

ಟೆಂಡರ್ ಕಡತಗಳ ವಿಲೇವಾರಿ ಬಗ್ಗೆ ಮತಾನಾಡಿದ ಆಲಂ ಪಾಷಾ, ನನ್ನ ಪ್ರಕಾರ ಒಂದೇ ಕಾಮಗಾರಿಗೆ ಈಶ್ವರಪ್ಪ ಮತ್ತು ಇತರರ ಈ ಇಲಾಖೆಗಳಲ್ಲಿ ಏಕಕಾಲದಲ್ಲಿ ಎರಡು ಟೆಂಡರ್ ಕಡತಗಳು ಚಾಲ್ತಿಯಲ್ಲಿದೆ. ಒಂದು ಶೇ.40ರ ಕಮಿಷನ್ನಂತೆ ಸಿದ್ಧಗೊಳಿಸಿ, ಮತ್ತೊಂದನ್ನು ಶೇ.40 ಕಮಿಷನ್ ಸಿಕ್ಕ ಬಳಿಕ ಬಿಲ್ ಪಾವತಿಸುವ ವ್ಯವಸ್ಥೆಯಿದೆ. ಈ ರೋಗಗಳ ಬಗ್ಗೆ ನಾನು ಈಗಾಗಲೇ ಪುರಾವೆ ಸಹಿತ ಎಸಿಬಿಗೆ ದೂರು ಸಲ್ಲಿಸಿದ್ದೇನೆ ಎಂದು ತಿಳಿಸಿದರು.

Share