Connect with us


      
ಸಾಮಾನ್ಯ

ನಾವೇಕೆ ತತ್ವಶಾಸ್ತ್ರ ಓದಬೇಕು ?

Kumara Raitha

Published

on

ಡಾ. ಜ್ಯೋತಿ ಎಸ್.

(ಯು.ಎನ್.ಐ.) ಮನುಷ್ಯನಿಗೆ ಸ್ವಚಿಂತನೆ ಎಷ್ಟು ಮುಖ್ಯ?  ತತ್ವಶಾಸ್ತ್ರಜ್ಞ ರೆನೆ ಡೆಸ್ಕಾರ್ಟೆಸ್ ಕಂಡುಕೊಂಡಂತೆ, ‘ನಾನು ಸ್ವಚಿಂತನೆ ಮಾಡುವುದರಿಂದ, ನಾನು ನಾನಾಗಿದ್ದೇನೆ’,  ವ್ಯಕ್ತಿತ್ವ ವಿಕಸನಕ್ಕೆ ಸ್ವಚಿಂತನೆ ಬಹಳ  ಮುಖ್ಯ.  ಯಾಕೆಂದರೆ, ಪೂರ್ವನಿರ್ಧರಿತ ಸಾಮಾಜಿಕ ಮಾನದಂಡಗಳು ನಮ್ಮೆಲ್ಲರ ಬದುಕನ್ನು ಏಕತಾನತೆಗೆ ತಳ್ಳುತ್ತವೆ. ಆದರೆ,  ನಮ್ಮ ಬದುಕು ನಿಜವಾಗಿ ನಮ್ಮ ಕೈಯಲ್ಲಿದೆ. ಕಣ್ಮುಚ್ಚಿಕೊಂಡು ಸಿದ್ದ ಮಾದರಿಯ ವ್ಯವಸ್ಥೆಗಳಿಗೆ ಅಂಟಿಕೊಂಡು ಬಾಳುವುದು ಬಾಳಲ್ಲ. ಬಾಳಿನ ವೈಶಿಷ್ಟ್ಯವಿರುವುದು ಭಿನ್ನತೆಯಲ್ಲಿ. ಇದನ್ನು ನಮಗೆ ವ್ಯವಸ್ಥೆಯ ಯಾವ ಅಂಶಗಳು ಹೇಳಿಕೊಡುವುದಿಲ್ಲ. ಯಾಕೆಂದರೆ ಮನುಷ್ಯ ನಿರ್ಮಿತ ವ್ಯವಸ್ಥೆಗಳ ಮೂಲ ಬಂಡವಾಳವೇ ಪ್ರಶ್ನೆಗಳನ್ನು ಹತ್ತಿಕ್ಕುವುದು. ಹಾಗಾಗಿ, ನಾವು ಅಜ್ಜ ನೆಟ್ಟ ಆಲದಮರಕ್ಕೆ ಸುತ್ತುಬಂದಂತೆ ನಾವು ವ್ಯವಸ್ಥೆಯನ್ನು ಅನುಸರಿಸಿಕೊಂಡು ಬದುಕುತ್ತೇವೆ.

ಆದರೂ ಕೂಡ, ಮನುಷ್ಯನ ಇತಿಹಾಸದಲ್ಲಿ ಈ ಸಿದ್ದ ಮಾದರಿಯ ವ್ಯವಸ್ಥೆಗಳನ್ನು ಪ್ರಶ್ನಿಸಿದವರೇನೇ ಮಹಾನ್ ವ್ಯಕ್ತಿಗಳೆನಿಸಿಕೊಂಡಿದ್ದಾರೆ ಎನ್ನುವುದು ಕೂಡ ಅಷ್ಟೇ ಸತ್ಯ. ಹಾಗಿದ್ದಲ್ಲಿ ಅವರೇನು ವಿಭಿನ್ನವಾಗಿ ಮಾಡಿದ್ದಾರೆ? ಅವರು ಮಾಡಿರುವುದು ವ್ಯವಸ್ಥೆಯನ್ನು ಪ್ರಶ್ನಿಸಿದ್ದು. ಹಾಗಾಗಿಯೇ, ಗೌತಮ ಅರಮನೆಯ ವೈಭೋಗವನ್ನು ತೊರೆದು ಬುದ್ಧನಾಗಿ ಸಾಮಾನ್ಯರಂತೆ ಬದುಕುವುದರಲ್ಲಿ ಸಾರ್ಥಕ್ಯ ಕಂಡ, ಗಾಂಧಿ ವಕೀಲ ವೃತ್ತಿ ಮಾಡಿ ಆರಾಮವಾಗಿ ಜೀವನ ಮಾಡುವುದರ ಬದಲಾಗಿ ದೇಶಕ್ಕೆ ಸ್ವಾತಂತ್ರ್ಯ ಮತ್ತು ಒಂದು ಆದರ್ಶ ಜೀವನ ಮಾದರಿ ಕೊಟ್ಟರು, ಬಸವಣ್ಣರಿಗೆ ಸಮಾಜದಲ್ಲಿ ಸಮಾನತೆ ತರಬೇಕೆನಿಸಿತು. ಈ ಹಿನ್ನೆಲೆಯಲ್ಲಿ ವ್ಯವಸ್ಥೆಯನ್ನು ಪ್ರಶ್ನಿಸುವ ಜ್ಞಾನವನ್ನು ತುಂಬುವಂತಹ ಶಿಕ್ಷಣ ನಮಗೆ ಸಿಗುವುದು ಉತ್ತಮ.

          ಆದರೆ, ನಮ್ಮ ಪ್ರಸಕ್ತ ಶಿಕ್ಷಣ ವ್ಯವಸ್ಥೆಯು ವಿದ್ಯಾರ್ಥಿಗಳನ್ನು ಸ್ವಂತವಾಗಿ ಯೋಚಿಸುವಂತೆ ಮಾಡುತ್ತಿದೆಯೇ? ಇದಕ್ಕೆ ವ್ಯತಿರಿಕ್ತವಾಗಿ, ಈ ಭೌತಿಕ ಪ್ರಪಂಚದ ಅಬ್ಬರದಲ್ಲಿ ನಮ್ಮ ವಿದ್ಯಾರ್ಥಿಗಳು ತಮ್ಮ ಆತ್ಮದಿಂದ ದೂರವಾಗಿದ್ದಾರೆಯೇ? ನಾವು ನಮ್ಮ ಮುಂದಿನ ಪೀಳಿಗೆಯನ್ನು ಜೀವನಕ್ಕಾಗಿ ಸಿದ್ಧಪಡಿಸುತ್ತಿದ್ದೇವೆಯೇ ಅಥವಾ ಉದ್ಯೋಗಕ್ಕಾಗಿ ಮಾತ್ರವೇ? ಇದಲ್ಲದೆ, ಹಿಂದಿನ ಪೀಳಿಗೆಗಳಿಗೆ ಹೋಲಿಸಿದರೆ, ಇಂದಿನ ಮಕ್ಕಳು ಉತ್ತಮ ಜೀವನಮಟ್ಟ ಹೊಂದಿದ್ದರೂ, ಈಗ ಹದಿಹರೆಯದವರಲ್ಲಿ ಆತ್ಮಹತ್ಯೆ ಪ್ರಕರಣಗಳ ಸಂಖ್ಯೆ ತ್ವರಿತವಾಗಿ ಏರಿಕೆ ಕಂಡುಬರುತ್ತಿದೆ.  ಯಾಕೆ ಹೀಗೆ ?

ಕಾರಣಗಳು ಹಲವು. ಮೊದಲನೆಯದಾಗಿ, ಬ್ಯುಸಿಯಾಗಿರುವ ಪೋಷಕರಿಂದ ಮಕ್ಕಳಿಗೆ ಸಹಾನುಭೂತಿಯ ಮಾರ್ಗದರ್ಶನದ ಕೊರತೆಯಿದೆ. ವಿದ್ಯಾರ್ಥಿಗಳಲ್ಲಿ ಜೀವನ ಕೌಶಲ್ಯಗಳನ್ನು ಬೆಳೆಸದೆ, ಕಂಪನಿಗಳಿಗೆ ರೆಡಿಮೇಡ್ ಉತ್ಪನ್ನಗಳನ್ನಾಗಿ ಒದಗಿಸುವ ಕೆಲಸವನ್ನಷ್ಟೇ   ಶಿಕ್ಷಣ ವ್ಯವಸ್ಥೆ ಮಾಡುತ್ತಿದೆ. ಬೃಹತ್ ಪ್ರಮಾಣದ ಸಾಮಾಜಿಕ ಮಾಧ್ಯಮಗಳ ಹೊರತಾಗಿಯೂ ವಿದ್ಯಾರ್ಥಿಗಳಿಂದು ‘ಏಕಾಂತ ದ್ವೀಪ’ಗಳಾಗಿ ಮಾರ್ಪಡುತ್ತಿದ್ದಾರೆ.

ಹೀಗಾಗಿ, ನಾವಿಂದು ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಅಗತ್ಯವಿದೆ.  ಮೊದಲಿಗೆ, ‘ಬೋಧನೆಯ ಮೊದಲ ತತ್ವವೆಂದರೆ ಅದನ್ನು ಕಲಿಸಲಾಗುವುದಿಲ್ಲ’ ಎಂದು ಶ್ರೀ ಅರಬಿಂದೋ ಹೇಳುತ್ತಾರೆ. ಇದರರ್ಥ, ಕಲಿಕೆಯು ಅಂತರ್ಗತವಾದದ್ದು.  ಆದ್ದರಿಂದ, ಒಬ್ಬ ಶಿಕ್ಷಕನು ವಿದ್ಯಾರ್ಥಿಯ ನಿಜವಾದ ಸಾಮರ್ಥ್ಯವನ್ನು ಬಿಚ್ಚಿಡುತ್ತಾನೆ. ಅದನ್ನು ಹೇಗೆ ಮಾಡಬಹುದೆಂದರೆ, ತತ್ತ್ವಶಾಸ್ತ್ರದ ಮೂಲಕ.  ಯಾಕೆಂದರೆ, ತತ್ವಶಾಸ್ತ್ರ ಎಲ್ಲಾ ಜ್ಞಾನದ ಮೂಲ.

ಮೊದಲನೆಯದಾಗಿ, ಗ್ರೀಕ್ ಭಾಷೆಯಲ್ಲಿ ‘ತತ್ವಶಾಸ್ತ್ರ(ಫಿಲಾಸಫಿ)’ ಎಂದರೆ   ‘ವಿದ್ವತ್ತಿನ ಮೇಲಿನ ಪ್ರೀತಿ’ ಎಂದರ್ಥ. ತತ್ವಶಾಸ್ತ್ರವು, ತರ್ಕದ ಮೂಲಕ ಜಗತ್ತಿನಲ್ಲಿ ಮನುಷ್ಯನ ಅನುಭವವನ್ನು ವಿಶ್ಲೇಷಿಸುವ ಒಂದು ಮಾರ್ಗವಾಗಿದೆ. ಆದ್ದರಿಂದ, ತತ್ತ್ವಶಾಸ್ತ್ರ ಸ್ಪಷ್ಟವಾಗಿ ಬರೆಯಲು, ಸೂಕ್ಷ್ಮವಾಗಿ ಓದಲು, ಮಾಹಿತಿಯನ್ನು ವಿಮರ್ಶಿಸಲು, ಸರಿಯಾದ ಪ್ರಶ್ನೆಗಳನ್ನು ಕೇಳಲು, ಕೆಟ್ಟ ವಿಶ್ಲೇಷಣೆಯನ್ನು ಗುರುತಿಸಲು ಮತ್ತು ಲಭ್ಯವಿರುವ ಮಾಹಿತಿಯಿಂದ ಅಗತ್ಯವಾದುದನ್ನು ಹೊರತೆಗೆಯಲು ಕಲಿಸುತ್ತದೆ. ಆದ್ದರಿಂದ ತತ್ತ್ವಶಾಸ್ತ್ರವನ್ನು ಅಂತರ್ಗತಗೊಳಿಸಿದ ವ್ಯಕ್ತಿಯು ಈ ವಿಶ್ವದಲ್ಲಿ ತಾನೊಂದು  ಕೇವಲ ಬಿಂದು ಮತ್ತು ‘ನನಗೆ ನಿಜವಾಗಿಯೂ ಇನ್ನೂ ಏನನ್ನೂ ತಿಳಿದಿಲ್ಲ’ ಎಂಬ ಹೊಸ ಜಾಗೃತಿಯೊಂದಿಗೆ  ವಿನಮ್ರನಾಗುತ್ತಾನೆ. ಹೀಗಾಗಿ, ಅವನು ಹೊಸ ವಿಷಯಗಳನ್ನು ಕಲಿಯಲು ಮತ್ತು ನಿರಂತರವಾಗಿ ತನ್ನನ್ನು ತಾನು ಸರಿಪಡಿಸಿಕೊಳ್ಳಲು ತೆರೆದುಕೊಳ್ಳುತ್ತಾನೆ.

ಇಲ್ಲಿನ ಸಾಮಾನ್ಯ ಪ್ರಶ್ನೆ, ತತ್ವಶಾಸ್ತ್ರವಿಲ್ಲದೆ ನಾವು ಸಂತೋಷದ ಜೀವನವನ್ನು ನಡೆಸಲು ಸಾಧ್ಯವಿಲ್ಲವೇ?  ತತ್ವಜ್ಞಾನಿಗಳು ಸಲಹೆ ನೀಡುವಂತೆ, ನಾವು ಸಂತೋಷದ ಜೀವನಕ್ಕಿಂತ ಅರ್ಥಪೂರ್ಣ ಜೀವನವನ್ನು ಹುಡುಕಬೇಕು.

          ತತ್ತ್ವಶಾಸ್ತ್ರದ ಕಲಿಕೆ, ಶೈಕ್ಷಣಿಕ ಬೆಳವಣಿಗೆಯ ಹೊರತಾಗಿ, ಇದು ಜೀವನದ ಯಶಸ್ಸು ಅಥವಾ ವೈಫಲ್ಯ ಮತ್ತು ಎಲ್ಲಾ ಅನಿಶ್ಚಿತತೆಗಳ ನಡುವೆ ಸ್ಥಿರವಾಗಿ ನಿಲ್ಲುವಂತೆ ಮಾಡುತ್ತದೆ. ಇದು ಸಾಮಾನ್ಯವಾಗಿ ನಾವು ಪ್ರಾಶಸ್ತ್ಯ ನೀಡುವ ತಾಂತ್ರಿಕ ಕೌಶಲ್ಯಗಳನ್ನು ಮೀರಿ ವಿಮರ್ಶಾತ್ಮಕ ಚಿಂತನೆ ಮತ್ತು ಸೃಜನಶೀಲತೆಯನ್ನು ಪೋಷಿಸುತ್ತದೆ.

ಆದಾಗ್ಯೂ, ಶೈಕ್ಷಣಿಕ ಆಸಕ್ತಿಯ ಕೊರತೆಯಿಂದಾಗಿ ಅನೇಕ ವಿಶ್ವವಿದ್ಯಾಲಯಗಳಲ್ಲಿ ತತ್ವಶಾಸ್ತ್ರ ವಿಭಾಗಗಳು ಮುಚ್ಚುತ್ತಿವೆ. ಆದರೆ, ತತ್ವಶಾಸ್ತ್ರ ನಮ್ಮನ್ನು ಉತ್ತಮ ವಕೀಲರನ್ನಾಗಿ ಅಥವಾ ಸಹಾನುಭೂತಿಯ ನಾಯಕ ಅಥವಾ ಶ್ರೇಷ್ಠ ಶಿಕ್ಷಕರನ್ನಾಗಿ ಮಾಡಬಹುದು.  ಏಕೆಂದರೆ ತತ್ವಶಾಸ್ತ್ರವು ನಮ್ಮ ವಾದದ ಶೈಲಿಯನ್ನು ಚುರುಕುಗೊಳಿಸುತ್ತದೆ.  ಸಂಕೀರ್ಣ ಪಠ್ಯಗಳನ್ನುಸೂಕ್ಷ್ಮವಾಗಿ ಓದುವುದು ಅಥವಾ ಸ್ಪಷ್ಟ ಬರೆಯುವುದನ್ನು ಕಲಿಸುತ್ತದೆ. ಇದು ಕಡಿಮೆ ನಿರೀಕ್ಷೆಗಳೊಂದಿಗೆ ಬದುಕುವುದನ್ನು ಕಲಿಸುತ್ತದೆ.  ತತ್ತ್ವಶಾಸ್ತ್ರ ಎಲ್ಲಾ ವಿಷಯಗಳೊಂದಿಗೆ ಸಂಪರ್ಕ ಹೊಂದಿದೆ. ಆದ್ದರಿಂದ, ನಾವು ತಾತ್ವಿಕ ಚೌಕಟ್ಟಿನೊಳಗೆ ಯಾವ ವಿಷಯವನ್ನಾದರೂ ಅಧ್ಯಯನ ಮಾಡಬಹುದು.

ಆದಾಗ್ಯೂ, ವಾಸ್ತವದಲ್ಲಿ, ನಾವು ತತ್ತ್ವಶಾಸ್ತ್ರವನ್ನು ಕೇವಲ ಉಲ್ಲೇಖಗಳಿಗಷ್ಟೇ ಸೀಮಿತಗೊಳಿಸಿದ್ದೇವೆ. ನಾವು ಮಾತನಾಡುವಾಗ ಅಥವಾ ಬರೆಯುವಾಗ ಅವುಗಳ ನಿಜವಾದ ಮೌಲ್ಯಗಳನ್ನು ಅರಿಯದೆಯೇ ಬಳಸುತ್ತೇವೆ.

ವಿಶೇಷವೆಂದರೆ, ನಾವು ವೈಜ್ಞಾನಿಕ ಪ್ರಶ್ನೆಗಳನ್ನು ಮಾಡುತ್ತಾ ವಿಜ್ಞಾನದಲ್ಲಿ ಮಹತ್ತರವಾದ ಪ್ರಗತಿಯನ್ನು ಸಾಧಿಸಿದ್ದೇವೆ. ಆದರೆ, ತಾತ್ವಿಕ ಪ್ರಶ್ನೆಗಳ ಮೂಲಕ ಬದುಕನ್ನು ವಿಮರ್ಶಿಸಲು ಮರೆಯುತ್ತಿದ್ದೇವೆ. ವಿಸ್ಮಯವೆಂದರೆ, ಜ್ಞಾನಿಗಳು ಪ್ರಕೃತಿಯನ್ನು ಪ್ರಶ್ನಿಸಲು ಪ್ರಾರಂಭಿಸಿದಾಗ ವಿಜ್ಞಾನದ ಪ್ರಾರಂಭವಾಯಿತು. ಈ ಪ್ರಶ್ನಿಸುವ ಗುಣ ತತ್ವಶಾಸ್ತ್ರ ಕಲಿಸಿರುವುದು. ಅಂದರೆ, ವೈಜ್ಞಾನಿಕ ಕಾಲದ ಆರಂಭದ ಹೆಚ್ಚಿನ ವಿಜ್ಞಾನಿಗಳು ತತ್ವಶಾಸ್ತ್ರಜ್ಞರಾಗಿದ್ದರು. ಹಾಗಾಗಿ, ಅವರಿಂದ ಮಹೋನ್ನತ ಸಾಧನೆ ಮಾಡುವುದು ಸಾಧ್ಯವಾಯಿತು.

ಆದರೆ, ವರ್ತಮಾನದ ಜಗತ್ತು ತಾತ್ವಿಕ ಪ್ರಶ್ನೆಗಳನ್ನು ಪ್ರೋತ್ಸಾಹಿಸುವುದಿಲ್ಲ. ಏಕೆಂದರೆ, ಗ್ರಾಹಕ ಸಮಾಜವು ವೈಜ್ಞಾನಿಕ ಸಂಶೋಧನೆಯಲ್ಲಿ ಅಭಿವೃದ್ಧಿ ಹೊಂದುತ್ತದೆ, ಆದರೆ ತತ್ವಶಾಸ್ತ್ರವು ಆಂತರಿಕ ಬೆಳವಣಿಗೆಯ ಮೇಲೆ ಕೇಂದ್ರೀಕರಿಸುತ್ತದೆ.  ನಾವು ಆಂತರಿಕ ಬೆಳವಣಿಗೆ ಹೊಂದಿದಷ್ಟು, ಗ್ರಾಹಕ ಸಂಸ್ಕ್ರತಿಯಿಂದ ಮುಕ್ತರಾಗುತ್ತೇವೆ. ಅದಕ್ಕಾಗಿ ನಮಗೆ ತತ್ವಶಾಸ್ತ್ರ ಬೇಕು, ಆದರೆ ಕೊಳ್ಳುಬಾಕ ವರ್ತಮಾನದ ಜಗತ್ತಿಗೆ ಬೇಡ. ಆಯ್ಕೆ ನಮ್ಮಲ್ಲಿಯೇ ಇದೆ.‌

ಲೇಖಕರ ಪರಿಚಯ:

ಡಾ.ಜ್ಯೋತಿ ಎಸ್. ಅವರು ತುಮಕೂರು ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರುಸಾಹಿತ್ಯಸಾಮಾಜಿಕಆರ್ಥಿಕರಾಜಕೀಯ ವಿಷಯಗಳ ನಿಷ್ಪಕ್ಷಪಾತ ವಿಮರ್ಶಕರು. ಕಥೆಗಾರರು, ಕವಿ. ಇವರು ದೇಶದ  ವಿಶ್ವಾಸಾರ್ಹ ಸುದ್ದಿಸಂಸ್ಥೆ, ಯು.ಎನ್.. ಯಲ್ಲಿ ಅಂಕಣ ಆರಂಭಿಸಿರುವುದು ಸಂತಸದ ಸಂಗತಿ. ಪ್ರತಿ ಭಾನುವಾರ ಇವರ ಅಂಕಣ ಪ್ರಕಟವಾಗುತ್ತದೆ ಎಂದು ತಿಳಿಸಲು ಹರ್ಷವಾಗುತ್ತದೆ.

Share