Connect with us


      




ಕರ್ನಾಟಕ

ಬಾಲಕಿಯರ ಮೇಲೆ ದೌರ್ಜನ್ಯ ಪ್ರಕರಣ ವಿಚಾರಣೆ; ವಕೀಲರ ಉಚಿತ ನೆರವು

Kumara Raitha

Published

on

ಬೆಂಗಳೂರು: ಮಾರ್ಚ್‌ ೧೨ (ಯು.ಎನ್.‌ಐ.) 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣಗಳು ವರದಿಯಾದಾಗ ಆಯೋಗವು ಸ್ವಯಂ ಪ್ರೇರಣೆಯಿಂದ ದೂರು ದಾಖಲಿಸಿಕೊಳ್ಳುತ್ತದೆ. ತನಿಖೆಗೆ ಸಂಬಂಧಪಟ್ಟ ಪೋಲೀಸ್ ಇಲಾಖೆಗೆ ದೂರು ಕಳುಹಿಸುತ್ತದೆ. ಆರೋಪಿಯ ಶೀಘ್ರ ಬಂಧನ ಮತ್ತು ವಕೀಲರ ಉಚಿತ ಸೇವೆಯನ್ನು ಒದಗಿಸಲಾಗುತ್ತಿದೆ ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಪ್ರಮೀಳಾ ನಾಯ್ದು ಹೇಳಿದರು.

ಅವರಿಂದು ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದರು. ಹೆಣ್ಣುಮಕ್ಕಳ ಕಳ್ಳಸಾಗಾಣೆ ತಡೆಗಟ್ಟಲು ಆಯೋಗದಿಂದ ವಿಶೇಷ ರಕ್ಷಣಾ ಪಡೆ ಕಾರ್ಯನಿರ್ವಹಿಸುತ್ತಿದೆ. ಈ ಬಗ್ಗೆ ದೂರುಗಳು ಬಂದ ತಕ್ಷಣ ಸಂಬಂಧಪಟ್ಟ ಸ್ಥಳಕ್ಕೆ ಭೇಟಿ ನೀಡಿ ರಕ್ಷಣೆ ನೀಡಲಾಗುತ್ತಿದೆ ಎಂದು ವಿವರಿಸಿದರು.

ಕೋವಿಡ್ -19 ಸಾಂಕ್ರಾಮಿಕ ಒಂದನೇ ಅಲೆಯಲ್ಲಿ ರಾಜ್ಯ ಮಹಿಳಾ ಆಯೋಗಕ್ಕೆ ಸಾರ್ವಜನಿಕರು ಹಾಗೂ ಮಹಿಳೆಯರು ಕೌಟುಂಬಿಕ ದೌರ್ಜನ್ಯದ ಪ್ರಕರಣದ ಕುರಿತು ದೂರು ನೀಡಿ ರೇಷನ್, ಮೆಡಿಸಿನ್, ಅಗತ್ಯ ಸೌಲಭ್ಯಗಳನ್ನು ಒದಗಿಸಲು ಮನವಿ ಮಾಡಿದ್ದರು. ಮನವಿ ಬಂದ ಎಲ್ಲಾ ಕುಟುಂಬಗಳಿಗೆ ನೆರವು ನೀಡಲಾಗಿದೆ. ಐ.ಟಿ.ಬಿ.ಟಿ. ಕಂಪನಿ, ಕೆಲಸ ನಿರ್ವಹಿಸುತ್ತಿರುವ ಮಹಿಳಾ ಉದ್ಯೋಗಿಗಳು ತಮ್ಮ ಸ್ವಂತ ಕುಟುಂಬಸ್ಥರಿಂದಲೇ ದೌರ್ಜನ್ಯ ಮತ್ತು ಕಿರುಕುಳಕ್ಕೆ ಒಳಗಾಗಿ ದೂರು ನೀಡಿದ್ದರು. ಆ ಎಲ್ಲಾ ಮಹಿಳೆಯರಿಗೂ ಆರೋಗ್ಯ ಇಲಾಖೆಯ ನೋಡಲ್ ಅಧಿಕಾರಿಗಳ ಸಹಾಯದಿಂದ ಅಗತ್ಯ ವೈದ್ಯಕೀಯ ಸೌಲಭ್ಯ ಹಾಗೂ ರಕ್ಷಣೆಯನ್ನು ನೀಡಲಾಯಿತು ಎಂದು ಹೇಳಿದರು.

ಯುವ ಪೀಳಿಗೆಗಾಗಿ ಕಾಲೇಜುಗಳಲ್ಲಿ ಕಾನೂನು ಅರಿವು ಕಾರ್ಯಕ್ರಮವನ್ನು ಆಯೋಜಿಸುವ ಮೂಲಕ ದೇಶಕ್ಕೆ ಒಳ್ಳೆಯ ಪ್ರಜೆಗಳನ್ನು ಕೊಡುವುದು, ಕೆಲಸ ಮಾಡುವ ಸ್ಥಳದಲ್ಲಿ ಮಹಿಳೆಯರಿಗಾಗಿ ಆರೋಗ್ಯಕರ ವಾತಾವರಣ ನಿರ್ಮಿಸುವ ಉದ್ದೇಶದಿಂದ ಗಾರ್ಮೆಂಟ್ಸ್, ಫ್ಯಾಕ್ಟರಿ, ಸರ್ಕಾರಿ ಅಥವಾ ಖಾಸಗಿ ಕಚೇರಿಗಳಲ್ಲಿ ಆಯೋಗದ ವತಿಯಿಂದ ಕಾನೂನು ಅರಿವು ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದರು.

ಮುಂದಿನ ದಿನಗಳಲ್ಲಿ ರಾಜ್ಯದ ಯಾವುದೇ ಮಹಿಳೆ, ಸಮಾಜದ ಕಟ್ಟಕಡೆಯ ಮಹಿಳೆ ತನಗೆ ಉಂಟಾದ ಹಿಂಸೆ ಮತ್ತು ದೌರ್ಜನ್ಯವನ್ನು ಸಹಿಸಿಕೊಳ್ಳದೇ, ರಾಜ್ಯ ಮಹಿಳಾ ಆಯೋಗವನ್ನು ನಿರ್ಭೀತಿಯಿಂದ ಸಂಪರ್ಕಿಸಿದ್ದಲ್ಲಿ, ರಾಜ್ಯ ಮಹಿಳಾ ಆಯೋಗವು ಮಹಿಳೆಯರ ಸಂವಿಧಾನಿಕ ಹಕ್ಕುಗಳನ್ನು ರಕ್ಷಿಸಲು ಸದಾ ಸಿದ್ದವಿರುತ್ತದೆ ಎಂದು ತಿಳಿಸಿದರು.

ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ  ರೇಣುಕಾ ಶರ್ಮ ಇವರು ರಾಜ್ಯಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಈ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕೋವಿಡ್ -19 ರ ಸಾಂಕ್ರಾಮಿಕ ರೋಗದ ಒಂದು ಮತ್ತು ಎರಡನೇ ಅಲೆಗಳ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಮಹಿಳಾ ಆಯೋಗವು ನಿರ್ವಹಿಸಿದ ಕಾರ್ಯಗಳು ಅತ್ಯಂತ ಶ್ಲಾಘನೀಯ ಎಂದು ಎಲ್ಲರಿಗೂ  ಅವರು ಶುಭಾಶಯ ಕೋರಿದರು.

Share