Connect with us


      




ದೇಶ

ಇಂದಿನಿಂದ ಯುಪಿಯಲ್ಲಿ ಯೋಗಿ ಆಡಳಿತ – ಸಂಜೆ 4 ಗಂಟೆಗೆ ಪ್ರಮಾಣವಚನ

Iranna Anchatageri

Published

on

ಲಕ್ನೋ: ಮಾರ್ಚ್ 25 (ಯು.ಎನ್.ಐ.) ಯೋಗಿ ಆದಿತ್ಯನಾಥ್ ಇಂದು ಸತತ ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಇದರೊಂದಿಗೆ ಐದು ವರ್ಷಗಳ ಅಧಿಕಾರಾವಧಿಯನ್ನು ಪೂರ್ಣಗೊಳಿಸಿದ ಬಳಿಕ ಮತ್ತೆ ರಾಜ್ಯದ ಚುಕ್ಕಾಣಿ ಹಿಡಿಯುತ್ತಿರುವ ಯುಪಿಯ ಮೊದಲ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಗೆ ಯೋಗಿ ಪಾತ್ರರಾಗಲಿದ್ದಾರೆ.

ಗುರುವಾರ ಬಿಜೆಪಿಯ ಶಾಸಕಾಂಗ ಪಕ್ಷವು, ಯೋಗಿ ಅವರನ್ನು ತನ್ನ ನಾಯಕನನ್ನಾಗಿ ಅವಿರೋಧವಾಗಿ ಆಯ್ಕೆ ಮಾಡಿದೆ. ಇದಾದ ನಂತರ ಯೋಗಿ ಅವರು ರಾಜ್ಯಪಾಲ ಆನಂದಿಬೆನ್ ಪಟೇಲ್ ಅವರ ಮುಂದೆ ಸರ್ಕಾರ ರಚಿಸುವ ಹಕ್ಕನ್ನು ಮಂಡಿಸಿದರು. ಸರ್ಕಾರ ರಚಿಸಲು ಯೋಗಿ ಅವರು ರಾಜ್ಯಪಾಲರನ್ನು ಆಹ್ವಾನಿಸಿದರು. ಇಂದು ಸಂಜೆ 4 ಗಂಟೆಗೆ ಅಟಲ್ ಬಿಹಾರಿ ವಾಜಪೇಯಿ ಏಕಾನಾ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿರುವ ಭವ್ಯ ಸಮಾರಂಭದಲ್ಲಿ ಯೋಗಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ಮೋದಿ ಸಮ್ಮುಖದಲ್ಲಿ ಪ್ರಮಾಣ ವಚನ
ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಸೇರಿದಂತೆ ಬಿಜೆಪಿ ಆಡಳಿತವಿರುವ ರಾಜ್ಯಗಳ ಮುಖ್ಯಮಂತ್ರಿಗಳ ಸಮ್ಮುಖದಲ್ಲಿ ರಾಜ್ಯಪಾಲ ಆನಂದಿಬೆನ್ ಪಟೇಲ್ ಅವರು ಯೋಗಿ ಆದಿತ್ಯನಾಥ್ ಅವರಿಗೆ ಅಧಿಕಾರ ಮತ್ತು ಗೌಪ್ಯತೆಯ ಪ್ರಮಾಣ ವಚನ ಬೋಧಿಸಲಿದ್ದಾರೆ. ಅವರೊಂದಿಗೆ ಸುಮಾರು 45 ಸಚಿವರು ಪ್ರಧಾನಿ ಮೋದಿ ಸಮ್ಮುಖದಲ್ಲಿ  ಪ್ರಮಾಣ ವಚನ ಸ್ವೀಕರಿಸಬಹುದು ಎಂದು ಮೂಲಗಳು ತಿಳಿಸಿವೆ.

ಉಪಮುಖ್ಯಮಂತ್ರಿ ಸಸ್ಪೆನ್ಸ್ ಮುಂದುವರಿದಿದೆ
ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಉಪಮುಖ್ಯಮಂತ್ರಿ ಹುದ್ದೆ ಸೃಷ್ಟಿ ಬಗ್ಗೆ ಘೋಷಣೆ ಆಗಿಲ್ಲ. 2017 ರಲ್ಲಿ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಯಾದ ನಂತರ ಯೋಗಿ ಆದಿತ್ಯನಾಥ್ ಇಬ್ಬರು ಉಪ ಮುಖ್ಯಮಂತ್ರಿಗಳನ್ನು ನೇಮಕ ಮಾಡಲು ಪ್ರಸ್ತಾಪಿಸಿದ್ದರು. ಆ ನಂತರ ಕೇಶವ್ ಪ್ರಸಾದ್ ಮೌರ್ಯ ಮತ್ತು ಡಾ.ದಿನೇಶ್ ಶರ್ಮಾ ಅವರನ್ನು ಉಪಮುಖ್ಯಮಂತ್ರಿಗಳಾಗಿ ನೇಮಿಸಲಾಯಿತು. ಗುರುವಾರ ನಡೆದ ಸಭೆಯಲ್ಲಿ ಉಪಮುಖ್ಯಮಂತ್ರಿ ಘೋಷಣೆ ಕುರಿತು ಊಹಾಪೋಹಗಳು ಎದ್ದಿದ್ದವೇ ಹೊರತು, ಪಕ್ಷವು ಉಪ ಮುಖ್ಯಮಂತ್ರಿ ಹುದ್ದೆ ಗುಟ್ಟನ್ನು ಬಿಟ್ಟುಕೊಟ್ಟಿಲ್ಲ.

Share